ADVERTISEMENT

ಯಲಹಂಕ: ಹಣ ದುರುಪಯೋಗ ಆರೋಪ, ಕ್ರಮಕ್ಕೆ ಒತ್ತಾಯ     

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 15:44 IST
Last Updated 9 ಸೆಪ್ಟೆಂಬರ್ 2023, 15:44 IST
<div class="paragraphs"><p>–ಪ್ರಾತಿನಿಧಿಕ ಚಿತ್ರ</p></div>

–ಪ್ರಾತಿನಿಧಿಕ ಚಿತ್ರ

   

ಯಲಹಂಕ: ಬೆಂಗಳೂರು ಉತ್ತರ ತಾಲ್ಲೂಕು ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಕೇಶವಮೂರ್ತಿ ಅವರು, ಕಮ್ಮಸಂದ್ರದಲ್ಲಿ ‘ಕ್ಷೀರ ಸಮೃದ್ದಿ ಉತ್ಸವ-2023’ ಕಾರ್ಯಕ್ರಮದ ಹೆಸರಿನಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ ಎಂದು ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ದಿಬ್ಬೂರು ಜಯಣ್ಣ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕಾರ್ಯಕ್ರಮಕ್ಕೆ ಒಕ್ಕೂಟದಿಂದ ಹಣ ಪಡೆದಿದ್ದಾರೆ. ಜತೆಗೆ, ಹಾಲು ಉತ್ಪಾದಕರ ಸಂಘಗಳಿಂದ ಹಣ ಪಡೆದಿದ್ದಾರೆ ಎಂದು ದೂರಿದರು.

ADVERTISEMENT

‘ದಾಸನಪುರ ಹೋಬಳಿಯ ಕಮ್ಮಸಂದ್ರದಲ್ಲಿ ಆಚರಿಸಿಕೊಂಡಿರುವ ಈ ಕಾರ್ಯಕ್ರಮಕ್ಕೆ ಒಕ್ಕೂಟದಿಂದ ₹5 ಲಕ್ಷ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಹಾಗೂ ಹಾಲು ಸರಬರಾಜು ಮಾಡುವ ಡೇರಿಗಳಿಂದ ಪಡೆದಿರುವ ಹಣ ಹಿಂದಿರುಗಿಸಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರ ಕ್ರಮಕೈಗೊಳ್ಳದಿದ್ದರೆ ರಾಜಾನುಕುಂಟೆಯಲ್ಲಿರುವ ಒಕ್ಕೂಟದ ಬೆಂಗಳೂರು ಉತ್ತರ ತಾಲ್ಲೂಕು ಉಪ ವ್ಯವಸ್ಥಾಪಕರ ಶಿಬಿರದ ಕಚೇರಿ ಎದುರು ಸೆಪ್ಟೆಂಬರ್ 25ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.

ಇಟಗಲ್ಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಮೋಹನ್ ಕುಮಾರ್ ಮಾತನಾಡಿ, ‘ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿ, ಸ್ಥಳೀಯ ಶಾಸಕ ಎಸ್. ಆರ್.ವಿಶ್ವನಾಥ್ ಅವರನ್ನು ನಿರ್ಲಕ್ಷಿಸಿದ್ದಾರೆ. ಕಾಂಗ್ರೆಸ್ ಮುಖಂಡರು ಹಾಗೂ ಬೆಂಗಳೂರು ಹಾಲು ಒಕ್ಕೂಟದ ಅಧಿಕಾರಿಗಳನ್ನು ಆಹ್ವಾನಿಸಿ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ಹಾಲು ಒಕ್ಕೂಟದ ವ್ಯವಸ್ಥಾಪಕರಿಗೆ ದೂರು ನೀಡಲಾಗಿದೆ. ಅಲ್ಲದೆ ಈ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.