ADVERTISEMENT

ವಂದೇ ಭಾರತ್‌ಗೆ ಬೇಡಿಕೆ; ವೇಗ ಹೆಚ್ಚಳಕ್ಕೆ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 19:32 IST
Last Updated 24 ನವೆಂಬರ್ 2022, 19:32 IST
ವಂದೇ ಭಾರತ್ ರೈಲು
ವಂದೇ ಭಾರತ್ ರೈಲು   

ಬೆಂಗಳೂರು: ಮೈಸೂರು–ಚೆನ್ನೈ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಯಾಣಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಈ ನಡುವೆ ವೇಗವನ್ನು ಇನ್ನಷ್ಟು ಹೆಚ್ಚಿಸಲು ಕಾರ್ಯಾ ಸಾಧ್ಯತಾ ಅಧ್ಯಯವನ್ನು ನೈರುತ್ಯ ರೈಲ್ವೆ ಆರಂಭಿಸಿದೆ.

ವಂದೇ ಭಾರತ್ ರೈಲು ಚೆನ್ನೈನಿಂದ ಮೈಸೂರಿಗೆ 6 ಗಂಟೆ 30 ನಿಮಿಷದಲ್ಲಿ ತಲುಪುತ್ತಿದ್ದು, ಶತಾಬ್ದಿ ರೈಲು ಸಂಚಾರಕ್ಕೆ 7 ಗಂಟೆ ಬೇಕಾಗುತ್ತಿದೆ. ಅದೇ ರೀತಿ ಮೈಸೂರಿನಿಂದ ಚೆನ್ನೈಗೆ ವಂದೇ ಭಾರತ್ ರೈಲು 6.25 ನಿಮಿಷಕ್ಕೆ ತೆರಳುತ್ತಿದ್ದು, ಶತಾಬ್ದಿ ರೈಲು 7 ಗಂಟೆ 15 ನಿಮಿಷ ತೆಗೆದುಕೊಳ್ಳುತ್ತಿದೆ.

‘ಸದ್ಯ ಮೈಸೂರು, ಚೆನ್ನೈ ನಡುವೆ ಇರುವ ರೈಲು ಹಳಿಯಲ್ಲಿ ಗಂಟೆಗೆ 100ರಿಂದ 110 ‌ಕಿಲೋ ಮೀಟರ್ ವೇಗದಲ್ಲಿ ಮಾತ್ರ ಸಂಚರಿಸಲು ಸಾಧ್ಯವಿದೆ. ಅದನ್ನು 130 ಕಿಲೋ ಮೀಟರ್‌ಗೆ ಹೆಚ್ಚಿಸಲು ಸಾಧ್ಯವೇ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಕಾರ್ಯಸಾಧ್ಯತಾ ವರದಿ ಆಧರಿಸಿ ಬದಲಾವಣೆ ಮಾಡಬೇಕಾಗುತ್ತದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿಶ್ ಹೆಗಡೆ ‘‍ಪ್ರಜಾವಾಣಿ’ಗೆ ಹೇಳಿದರು.

ADVERTISEMENT

ಇದರ ನಡುವೆಯೂ ವಂದೇ ಭಾರತ್ ರೈಲು ಪ್ರಯಾಣಕ್ಕೆ ಜನರ ಬೇಡಿಕೆ ಹೆಚ್ಚುತ್ತಿದೆ. ನ.12ರಿಂದ 22ರ ನಡುವೆ ಚೆನ್ನೈನಿಂದ ಮೈಸೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿ(ಇ.ಸಿ) ಶೇ 147 ಮತ್ತು ಚೇರ್‌ಕಾರ್‌ ಬೋಗಿಯಲ್ಲಿ(ಸಿ.ಸಿ) ಶೇ 115 ಪ್ರಯಾಣ ಬಯಸಿದ್ದರು. ಇದೇ ಅವಧಿಯಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಕ್ರಮವಾಗಿ ಶೇ 64(ಇ.ಸಿ) ಮತ್ತು 85(ಸಿ.ಸಿ) ಜನ ಪ್ರಯಾಣಿಸಿದ್ದಾರೆ.

ಮೈಸೂರಿನಿಂದ ಚೆನ್ನೈಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ಶೇ 125(ಇ.ಸಿ) ಮತ್ತು ಶೇ 97(ಸಿ.ಸಿ) ಜನ ಪ್ರಯಾಣ ಬಯಸಿದ್ದರು. ಶತಾಬ್ದಿಯಲ್ಲಿ ಶೇ 75(ಇ.ಸಿ) ಮತ್ತು ಶೇ 98(ಸಿ.ಸಿ) ಜನ ಪ್ರಯಾಣಿಸಿದ್ದಾರೆ. ಸುಖಾಸೀನ ಮತ್ತು ವೇಗದ ಪ್ರಯಾಣಕ್ಕೆ ಜನ ಆಕರ್ಷಿತರಾಗುತ್ತಿದ್ದಾರೆ ಎಂದು ಅನೀಶ್ ಹೆಗಡೆ ಹೇಳಿದರು.

ವೇಗಕ್ಕೆ ಹಳಿಯೇ ಅಡ್ಡಿ

ಗಂಟೆಗೆ ಗರಿಷ್ಠ 180 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ವಂದೇ ಭಾರತ್ ರೈಲಿಗಿದ್ದರೂ ಇರುವ ರೈಲು ಮಾರ್ಗ ಅದಕ್ಕೆ ಹೊಂದಾಣಿಕೆಯಾಗುತ್ತಿಲ್ಲ. ಇದು ವಂದೇ ಭಾರತ್ ರೈಲಿನ‌ ವೇಗಕ್ಕೆ ಅಡ್ಡಿಯಾಗಿದೆ.

ಇತ್ತೀಚೆಗೆ ನೆಡಸಿರುವ ಪರೀಕ್ಷಾರ್ಥ ಸಂಚಾರದಲ್ಲೂ ಇದು ಬೆಳಕಿಗೆ ಬಂದಿದೆ. ಜೋಲ್ಹಾರಪೇಟೆ–ಮೈಸೂರು ನಡುವೆ ಕಡಿಮೆ ವೇಗದಲ್ಲಿ (ಗಂಟೆಗೆ 73 ಕಿಲೋ ಮೀಟರ್‌) ವಂದೇ ಭಾರತ್ ಸಂಚರಿಸಿದ್ದರೆ, ಜೋಹ್ಲಾರಪೇಟೆಯಿಂದ 80 ಕಿ.ಮೀ. ವೇಗದಲ್ಲಿ ಕ್ರಮಿಸಿದೆ. ಮೂರ್ನಾಲ್ಕು ಕಡೆಗಳಲ್ಲಿ ಮಾತ್ರ ಗಂಟೆಗೆ 100 ಕಿಲೋ ಮೀಟರ್ ವೇಗವನ್ನು ರೈಲು ದಾಟಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.