ಬೆಂಗಳೂರು: ‘ಸಮಗ್ರ ಶಿಕ್ಷಣ ಅಭಿಯಾನದ ಅಡಿಯಲ್ಲಿ ಬರುವ ಕೆಜಿಬಿವಿ, ಕೆಕೆಜಿಬಿವಿ, ಆರ್‌ಎಂಎಸ್‌ಎ ಹಾಗೂ ಇತರೆ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ನೌಕರರ ಸೇವೆಯನ್ನು ಕಾಯಂಗೊಳಿಸಬೇಕು’ ಎಂದು ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್ ಆಗ್ರಹಿಸಿದರು.
ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ (ಕೆಜಿಬಿವಿ) ಗುತ್ತಿಗೆ ನೌಕರರ ಸಂಘ ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಕೆಜಿಬಿವಿ ಗುತ್ತಿಗೆ ನೌಕರರು ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿರುವುದು ಅಮಾನವೀಯ. ನೀವೆಲ್ಲರೂ ಸಂಘಟಿತರಾಗಿ ಇದರ ವಿರುದ್ಧ ಧ್ವನಿ ಎತ್ತಬೇಕು’ ಎಂದು ಕರೆ ನೀಡಿದರು.
‘ಬೀದರ್‌ನಲ್ಲಿ ರಚಿಸಿರುವ ಕಾರ್ಮಿಕರ ವಿವಿಧೋದ್ದೇಶಗಳ ಸಹಕಾರಿ ಸಂಘದ ಮಾದರಿಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಸಹಕಾರಿ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. 12 ತಿಂಗಳ ಪೂರ್ಣ ವೇತನ ಪಾವತಿಸಬೇಕು. ಕ್ರಾಫ್ಟ್ ಹುದ್ದೆಯನ್ನು ಮುಂದುವರೆಸಬೇಕು. ಹಗಲು ಮತ್ತು ರಾತ್ರಿಗೆ ಪ್ರತ್ಯೇಕವಾಗಿ ಕಾವಲುಗಾರರನ್ನು ನೇಮಿಸಿ, ಅವರಿಗೆ ಪ್ರತ್ಯೇಕ ವೇತನವನ್ನು ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಎನ್.ಎಸ್. ವೀರೇಶ್ ಮಾತನಾಡಿ, ‘ಕೆಜಿವಿಬಿ ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು. ಅಡುಗೆ ಸಿಬ್ಬಂದಿ ಪೂರೈಕೆ ಮತ್ತು ಆಹಾರ ಪದಾರ್ಥಗಳ ಪೂರೈಕೆಗೆ ಒಂದೇ ಟೆಂಡರ್ ಕರೆಯಬಾರದು. ಅಡುಗೆ ಸಿಬ್ಬಂದಿ ಪೂರೈಕೆಗೆ ಮಾನವ ಸಂಪನ್ಮೂಲ ಪೂರೈಕೆ ಅಡಿಯಲ್ಲಿ ಪ್ರತ್ಯೇಕ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಅವರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಟಿ.ಎಸ್. ರಮಾ, ಎಐಯುಟಿಯುಸಿ ರಾಜ್ಯ ಘಟಕದ ಉಪಾಧ್ಯಕ್ಷೆ ಡಿ. ನಾಗಲಕ್ಷ್ಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.