ಬೆಂಗಳೂರು: ಡೆಂಗಿ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚುವರಿ ಹಣ ಪಡೆಯುತ್ತಿದ್ದ ನಗರದ 22 ಪ್ರಯೋಗಾಲಯಗಳಿಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.
ಆರೋಗ್ಯಾಧಿಕಾರಿಗಳ ತಂಡ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ ಮತ್ತು ಆನೇಕಲ್ ತಾಲ್ಲೂಕು ವ್ಯಾಪ್ತಿಯಲ್ಲಿನ 31 ಖಾಸಗಿ ಸಂಸ್ಥೆಗಳಿಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಈ ವೇಳೆ ಹಲವು ಸಂಸ್ಥೆಗಳು ಅಧಿಕ ಹಣ ಪಡೆಯುತ್ತಿರುವುದು ದೃಢಪಟ್ಟಿದೆ. ಇದರಿಂದಾಗಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಹಾಗೂ ಕೆಪಿಎಂಇ ಕಾಯ್ದೆಯಡಿ ಆರೋಗ್ಯ ಇಲಾಖೆ ನೋಟಿಸ್ ನೀಡಿದ್ದು, ಕಾನೂನಿನ ಅಡಿ ಕ್ರಮಕೈಗೊಳ್ಳಲು ಮುಂದಾಗಿದೆ.
ಡೆಂಗಿ ಪರೀಕ್ಷೆಗೆ ಖಾಸಗಿ ಪ್ರಯೋಗಾಲಯ ಹಾಗೂ ಆಸ್ಪತ್ರೆಗಳು ಅಧಿಕ ಹಣ ವಸೂಲಿ ಮಾಡುತ್ತಿವೆ ಎಂಬ ದೂರುಗಳು ಬಂದಿದ್ದರಿಂದ ಸರ್ಕಾರವು ಕೆಲ ದಿನಗಳ ಹಿಂದೆ ಈ ಪರೀಕ್ಷೆಗೆ ದರ ನಿಗದಿ ಮಾಡಿ, ಆದೇಶ ಹೊರಡಿಸಿದೆ. ಎಲಿಸಾ ಎನ್ಎಸ್ 1 ಪರೀಕ್ಷೆಗೆ ₹ 300, ಎಲಿಸಾ ಐಜಿಎಂ ಪರೀಕ್ಷೆಗೆ ₹ 300 ನಿಗದಿಪಡಿಸಲಾಗಿದೆ. ‘ರ್‍ಯಾಪಿಡ್ ಕಾರ್ಡ್’ ಪರೀಕ್ಷೆಗೆ ₹ 250 ಗೊತ್ತುಪಡಿಸಲಾಗಿದೆ.
ನೋಟಿಸ್ ಪಡೆದ ಸಂಸ್ಥೆಗಳು: ಯಲಹಂಕದ ಪ್ರೈಮ್ ಡಯಾಗ್ನೋಸ್ಟಿಕ್ಸ್, ಆಸ್ಟರ್ ಕ್ಲಿನಿಕ್, ಸಿಗ್ಮಾ ಡಯಾಗ್ನೋಸ್ಟಿಕ್ಸ್, ದೊಡ್ಡಬೊಮ್ಮಸಂದ್ರದ ಶ್ರೀ ರಾಘವ್ ಕ್ಲಿನಿಕ್, ವೈಟ್‌ಫೀಲ್ಡ್‌ನ ಡಾ. ಲಾಲ್ ಪಥ್ ಲ್ಯಾಬ್ಸ್, ಹೊರಮಾವಿನ ಟ್ರಸ್ಟ್ ಇನ್ ಆಸ್ಪತ್ರೆ, ಎಸ್‌ಜೆಪಿ ಆಸ್ಪತ್ರೆ, ಮೆಡಾಲ್ ಕ್ಲೂಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್, ಹೊಸೂರು ರಸ್ತೆಯ ಟಿಕೆಎಸ್ ಡಯಾಗ್ನೋಸ್ಟಿಕ್ ಸೆಂಟರ್, ವಿನೋದ್ ಡಯಾಗ್ನೋಸ್ಟಿಕ್ಸ್ ಮತ್ತು ಹೆಬ್ಬಗೋಡಿಯ ಮಹೇಶ ಹೆಲ್ತ್ ಕೇರ್ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.
ಜೆ.ಪಿ.ನಗರದ ಕ್ರಿಯಾ ಆಸ್ಪತ್ರೆ, ಎಲೆಕ್ಟ್ರಾನಿಕ್ ಸಿಟಿಯ ಸ್ಪಿಂಗ್ರ್ ಲೈಫ್ ಹೆಲ್ತ್ ಕೇರ್, ಇ-ಸಿಟಿ ಆಸ್ಪತ್ರೆ, ಜಯನಗರದ ಬಯೋ ಲೈನ್ ಲ್ಯಾಬೊರೇಟರೀಸ್, ಆಂಕ್ವೆಸ್ಟ್, ಕಮ್ಮನಹಳ್ಳಿಯ ಪ್ರಣವ್ ಡಯಾಗ್ನೋಸ್ಟಿಕ್ಸ್, ಬಾಗಲೂರಿನ ಬಾಲಾಜಿ ಲ್ಯಾಬ್ ಡಯಾಗ್ನೋಸ್ಟಿಕ್ಸ್, ಎಸ್‌ಎಲ್‌ವಿ ಡಯಾಗ್ನೋಸ್ಟಿಕ್ಸ್, ನಾಗವಾರ ಮುಖ್ಯ ರಸ್ತೆಯಲ್ಲಿನ ಆಲ್ಟಿಸ್ ಆಸ್ಪತ್ರೆ, ಕಾರ್ಟುಲಸ್ ಡಯಾಗ್ನೋಸ್ಟಿಕ್ಸ್ ಮತ್ತು ಕಮ್ಮನಹಳ್ಳಿಯ ಈಶಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅಧಿಕ ಹಣ ಪಡೆದ ಕಾರಣ ನೋಟಿಸ್ ಪಡೆದಿವೆ.
‘ಹೆಚ್ಚುವರಿ ದರ ಪಡೆದರೆ ದೂರು ಸಲ್ಲಿಸಿ’
ಡೆಂಗಿ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚುವರಿ ದರ ಪಡೆಯುವ ಆಸ್ಪತ್ರೆ ಹಾಗೂ ಪ್ರಯೋಗಾಲಯಗಳ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಬೆಂಗಳೂರು ನಗರ ಜಿಲ್ಲೆ ಹಳೆ ಕ್ಷಯರೋಗಿಗಳ ಆಸ್ಪತ್ರೆ ಆವರಣ ಹಳೆ ಮದ್ರಾಸ್ ರಸ್ತೆ ಇಂದಿರಾನಗರ ಬೆಂಗಳೂರು-38 ಈ ವಿಳಾಸಕ್ಕೆ ದೂರು ಸಲ್ಲಿಸಬಹುದು. ಇ-ಮೇಲ್ ವಿಳಾಸ dhobangaloreurban@gmail.com ಅಥವಾ ಮೊ. 9449843037ಕ್ಕೆ ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.