ADVERTISEMENT

ಡೆಂಗಿ: ಸೊಳ್ಳೆ ಕಡಿತದಿಂದ ಜ್ವರ ಹೆಚ್ಚಳ -ಆರೋಗ್ಯಾಧಿಕಾರಿ ರವಿಶಂಕರ್

ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 22:56 IST
Last Updated 24 ಸೆಪ್ಟೆಂಬರ್ 2021, 22:56 IST
   

ಬೆಂಗಳೂರು:‘ಡೆಂಗಿ, ಚಿಕೂನ್‌ಗುನ್ಯಾ ಹಾಗೂ ಮಲೇರಿಯಾ ಜ್ವರ ಕೆಲವೆಡೆ ಕಾಣಸಿಕೊಳ್ಳುತ್ತಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಮನೆಯ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಬೆಂಗಳೂರು ದಕ್ಷಿಣತಾಲ್ಲೂಕು ಆರೋಗ್ಯಾಧಿಕಾರಿ ರವಿಶಂಕರ್ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ನಗರ ಜಿಲ್ಲೆಯಲ್ಲಿ ಕಳೆದ ವರ್ಷ 154 ಡೆಂಗಿ ಹಾಗೂ 13 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ. ಮುಂಗಾರು ಮಳೆ ಜೋರಾದಂತೆ ಈ ಜ್ವರಕ್ಕೆ ಹೆಚ್ಚಿನವರು ಒಳಪಡುವ ಸಾಧ್ಯತೆ ಇರುತ್ತದೆ.ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಸೊಳ್ಳೆ, ಸಂಗ್ರಹಿಸಿಟ್ಟ ನೀರಿನಲ್ಲಿ ಮೊಟ್ಟೆಯಿಟ್ಟು, ಸಂತಾನೋತ್ಪತ್ತಿ ಮಾಡುತ್ತದೆ. ಹಾಗಾಗಿ, ಮನೆಯ ಸುತ್ತಮುತ್ತ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದರು.

‘ನೀರಿನ ತೊಟ್ಟಿಗಳು, ಟ್ಯಾಂಕ್‌ಗಳು ಮತ್ತು ಬ್ಯಾರಲ್‌ಗಳನ್ನು ಕನಿಷ್ಠ ಒಂದು ವಾರಗಳಿಗೊಮ್ಮೆ ಸ್ವಚ್ಛಗೊಳಿಸಿ, ಮುಚ್ಚಿಡಬೇಕು. ಮಳೆ ನೀರು ಸಂಗ್ರಹವಾಗುವ ವಾಹನಗಳ ಚಕ್ರಗಳು, ತೆಂಗಿನ ಚಿಪ್ಪುಗಳನ್ನು ವಿಲೇವಾರಿ ಮಾಡಬೇಕು. ಹವಾನಿಯಂತ್ರಿತ ಯಂತ್ರಗಳು, ಹೂವಿನಕುಂಡಗಳಲ್ಲಿ ಪ್ರತಿ ವಾರ ನೀರನ್ನು ಖಾಲಿ ಮಾಡಬೇಕು’ ಎಂದು ಹೇಳಿದರು.

ADVERTISEMENT

‘2025ರ ಒಳಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಮಲೇರಿಯಾ ನಿರ್ಮೂಲನೆಗೆ ಪಣತೊಡಲಾಗಿದೆ. ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಜನರ ಸಹಕಾರ ಅಗತ್ಯ. ಇಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚಾಗಬಹುದು. ಜ್ವರ, ಮೈ–ಕೈ ನೋವು ಮತ್ತು ಕೀಲು ನೋವು,ತೀವ್ರತರ ತಲೆನೋವು ಸೇರಿದಂತೆ ವಿವಿಧ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಹತ್ತಿರ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ತೆರಳಿ, ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.