ADVERTISEMENT

ಡೆಂಗಿ: ಉಪ ನಿರ್ದೇಶಕರ ತಂಡದಿಂದ ಮೇಲ್ವಿಚಾರಣೆ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 18:04 IST
Last Updated 25 ಜುಲೈ 2024, 18:04 IST
ದಿನೇಶ್ ಗುಂಡೂರಾವ್ 
ದಿನೇಶ್ ಗುಂಡೂರಾವ್    

ಬೆಂಗಳೂರು: ‘ರಾಜ್ಯದಲ್ಲಿ ಹೆಚ್ಚು ಡೆಂಗಿ ಪ್ರಕರಣಗಳು ವರದಿಯಾಗಿರುವ ಹತ್ತು ಜಿಲ್ಲೆಗಳಿಗೆ ಆರೋಗ್ಯ ಇಲಾಖೆ ಉಪ ನಿರ್ದೇಶಕರ ತಂಡ ತೆರಳಿ, ಮೇಲ್ವಿಚಾರಣೆ ನಡೆಸಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.

ಗುರುವಾರ ಇಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ (ಸಿಇಒ) ಜತೆಗೆ ಸಭೆ ನಡೆಸಿದ ಸಚಿವರು, ‘ಮಳೆ, ಪ್ರವಾಹದ ನಡುವೆ ಡೆಂಗಿ ನಿಯಂತ್ರಣದ ಬಗ್ಗೆ ಗಮನ ಕಡಿಮೆಯಾಗಬಾರದು’ ಎಂದು ಸೂಚನೆ ನೀಡಿದರು.

‘ಆರೋಗ್ಯ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುತ್ತಿದೆ.‌ ಆದರೆ, ಡೆಂಗಿ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಇಷ್ಟರೊಳಗೆ ಡೆಂಗಿ ದೃಢ ಪ್ರಕರಣಗಳಲ್ಲಿ ಇಳಿಮುಖ ಕಂಡುಬರಬೇಕಿತ್ತು. ಪ್ರಕರಣಗಳು ವರದಿಯಾಗುತ್ತಿರುವುದನ್ನು ನೋಡಿದರೆ ಇನ್ನೂ ಎರಡು ತಿಂಗಳು ನಾವು ಎಚ್ಚರಿಕೆಯಿಂದ ಇರಬೇಕು. ಉಪ ನಿರ್ದೇಶಕರ ಮಟ್ಟದ ಅಧಿಕಾರಿಗಳು ಡೆಂಗಿ ಹೆಚ್ಚಿರುವ ‘ಹಾಟ್ ಸ್ಪಾಟ್‌’ಗಳಿಗೆ ಭೇಟಿ ನೀಡುವ ಜತೆಗೆ ಎರಡು ಮೂರು ದಿನಗಳು ಸ್ಥಳದಲ್ಲೇ ಇದ್ದು, ಮೇಲ್ವಿಚಾರಣೆ ನಡೆಸಬೇಕು’ ಎಂದು ತಿಳಿಸಿದರು. 

ADVERTISEMENT

‘ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯಕ್ರಮವು ಪ್ರತಿ ಶುಕ್ರವಾರ ಅಭಿಯಾನದ ರೀತಿಯಲ್ಲಿ ನಡೆಯಬೇಕು’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ 37 ಡೆಂಗಿ ‘ಹಾಟ್ ಸ್ಪಾಟ್‌’ಗಳನ್ನ ಗುರುತಿಸಲಾಗಿದ್ದು, ರಾಜ್ಯದಲ್ಲಿ ವರದಿಯಾದ ಒಟ್ಟು ಡೆಂಗಿ ಪ್ರಕರಣಗಳಲ್ಲಿ ಶೇ 50ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ದೃಢಪಟ್ಟಿವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.