ADVERTISEMENT

ದಂತವೈದ್ಯೆ ಆತ್ಮಹತ್ಯೆ: ವೈದ್ಯನ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 17:08 IST
Last Updated 2 ಫೆಬ್ರುವರಿ 2023, 17:08 IST
ಪ್ರಿಯಾನ್ಶಿ ತ್ರಿಪಾಠಿ
ಪ್ರಿಯಾನ್ಶಿ ತ್ರಿಪಾಠಿ   

ಬೆಂಗಳೂರು: ಎಂ.ಎಸ್. ರಾಮಯ್ಯ ಆಸ್ಪತ್ರೆಯ ದಂತವೈದ್ಯೆ ಡಾ. ಪ್ರಿಯಾನ್ಶಿ ತ್ರಿಪಾಠಿ (28) ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಿಗೆ ಕಿರುಕುಳ ನೀಡಿದ್ದ ಆರೋಪದಡಿ ಸಹೋದ್ಯೋಗಿ ವೈದ್ಯ ಡಾ. ಸುಮಿತ್ ವಿರುದ್ಧ ಸಂಜಯನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಉತ್ತರ ಪ್ರದೇಶದ ಪ್ರಿಯಾನ್ಶಿ, 2023ರ ಡಿಸೆಂಬರ್‌ನಿಂದ ರಾಮಯ್ಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ಎನ್‌ಟಿಐ ಬಡಾವಣೆಯ ಮನೆಯೊಂದರಲ್ಲಿ ವಾಸವಿದ್ದರು. ಜ. 24ರಂದು ಮನೆಯ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಂದೆ ಸುಶೀಲ್ ನೀಡಿರುವ ದೂರು ಆಧರಿಸಿ ಸುಮಿತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ವರ್ಷದಿಂದ ಕಿರುಕುಳ, ನೊಂದಿದ್ದ ಮಗಳು: ‘ಕಾನ್ಪುರದಲ್ಲಿ ಬಿ.ಡಿ.ಎಸ್. ಮುಗಿಸಿದ್ದ ಮಗಳು ಪ್ರಿಯಾನ್ಶಿ, 2020ರಲ್ಲಿ ಬೆಂಗಳೂರಿಗೆ ಬಂದು ರಾಮಯ್ಯ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಪೂರ್ಣಗೊಳಿಸಿದ್ದಳು. ನಂತರ, ಎರಡು ಆಸ್ಪತ್ರೆಗಳಲ್ಲಿ ಇಂಟರ್ನ್‌ಶಿಪ್ ಮುಗಿಸಿದ್ದಳು. ಬಳಿಕ, ರಾಮಯ್ಯ ಆಸ್ಪತ್ರೆಯಲ್ಲೇ ಕೆಲಸಕ್ಕೆ ಸೇರಿದ್ದಳು’ ಎಂದು ತಂದೆ ಸುಶೀಲ್ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ನನ್ನ ಮಗಳಿಗೆ ಒಂದು ವರ್ಷದಿಂದ ಆರೋಪಿ ಸುಮಿತ್ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ. ಹಣ ಕೊಡುವಂತೆ ಹಾಗೂ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಜೊತೆಗೆ, ಮಗಳ ಬಗ್ಗೆ ಕಾಲೇಜಿನಲ್ಲಿ ಕೆಟ್ಟದಾಗಿ ಸುದ್ದಿ ಹಬ್ಬಿಸಿದ್ದ. ಆರೋಪಿ ವರ್ತನೆಯಿಂದ ಬೇಸತ್ತಿದ್ದ ಮಗಳು, ನಮಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಳು. ನನ್ನ ಪತ್ನಿ, ಸುಮಿತ್‌ಗೆ ಕರೆ ಮಾಡಿ ಮಗಳ ತಂಟೆಗೆ ಹೋಗದಂತೆ ಎಚ್ಚರಿಕೆ ಸಹ ನೀಡಿದ್ದಳು’ ಎಂಬ ಸಂಗತಿಯೂ ದೂರಿನಲ್ಲಿದೆ.

‘ಇತ್ತೀಚೆಗೆ ಆರೋಪಿ ಕಿರುಕುಳ ಮಿತಿಮೀರಿತ್ತು. ಜ. 23ರಂದು ನನಗೆ ಕರೆ ಮಾಡಿದ್ದ ಮಗಳು, ‘ಸುಮಿತ್ ತುಂಬಾ ಕಿರುಕುಳ ನೀಡುತ್ತಿದ್ದಾನೆ. ಬೆಂಗಳೂರಿಗೆ ಬಂದು ನನ್ನನ್ನು ಕರೆದುಕೊಂಡು ಹೋಗಿ’ ಎಂದು ಕಣ್ಣೀರಿಟ್ಟಿದ್ದಳು. ಸುಮಿತ್ ತಂದೆಗೆ ಕರೆ ಮಾಡಿ, ಎಚ್ಚರಿಕೆ ನೀಡುವಂತೆ ಹೇಳಿದ್ದೆ. ಜ. 24ರಂದು ಬೆಳಿಗ್ಗೆ ಮಗಳಿಗೆ ಕರೆ ಮಾಡಿದಾಗ, ಸ್ವೀಕರಿಸಿರಲಿಲ್ಲ. ಮನೆ ಮಾಲೀಕರಿಗೆ ಕರೆ ಮಾಡಿ, ಮಗಳ ಬಳಿ ಹೋಗುವಂತೆ ತಿಳಿಸಿದ್ದೆ. ಅವರು ಮನೆ ಬಳಿ ಹೋದಾಗಲೇ ಆತ್ಮಹತ್ಯೆ ಸಂಗತಿ ಗೊತ್ತಾಯಿತು’ ಎಂದು ದೂರಿನಲ್ಲಿ ವಿವರಿಸಲಾಗಿದೆ.

‘ಆರೋಪಿ ಸುಮಿತ್, ಮಗಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ. ಮಗಳ ಸಾವಿಗೆ ಈತನೇ ಕಾರಣ’ ಎಂದೂ ಸುಶೀಲ್ ದೂರಿನಲ್ಲಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.