ADVERTISEMENT

ಇಲಾಖಾ ವಿಚಾರಣೆ: ನಿರ್ವಹಣೆಗೆ ಸಮನ್ವಯ ಅಧಿಕಾರಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 20:52 IST
Last Updated 18 ನವೆಂಬರ್ 2020, 20:52 IST

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವಿರುದ್ಧದ ಇಲಾಖಾ ವಿಚಾರಣೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಉದ್ದೇಶದಿಂದ ಪ್ರತಿ ಪ್ರಕರಣದಲ್ಲೂ ಒಬ್ಬ ಸಮನ್ವಯ ಅಧಿಕಾರಿಯನ್ನು ನೇಮಕ ಮಾಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.

ಈಗ ಇಲಾಖಾ ವಿಚಾರಣೆ ಪೂರ್ಣಗೊಳಿಸಲು 4 ತಿಂಗಳ ಕಾಲಮಿತಿ ಇದೆ. ಆದರೆ, ಆ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳ್ಳುತ್ತಿಲ್ಲ ಎಂಬ ಕಾರಣಕ್ಕಾಗಿ ಸಮನ್ವಯ ಅಧಿಕಾರಿಗಳನ್ನು ನೇಮಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಪಿ. ಹೇಮಲತಾ ನ. 9ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಎಲ್ಲ ಇಲಾಖೆಗಳಿಗೂ ಸೂಚನೆ ನೀಡಿದ್ದಾರೆ.

ಇಲಾಖಾ ವಿಚಾರಣೆಯ ಆರಂಭದಲ್ಲೇ ಸಮನ್ವಯ ಅಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಬೇಕು. ಆದೇಶದಲ್ಲೇ ಸಮನ್ವಯ ಅಧಿಕಾರಿಯ ಹೆಸರು, ಮೊಬೈಲ್‌ ಸಂಖ್ಯೆ ಮತ್ತು ಇ–ಮೇಲ್‌ ವಿಳಾಸ ಪ್ರಕಟಿಸಬೇಕು. ವಿಚಾರಣಾಧಿಕಾರಿಗೆ ಮೂಲಸೌಕರ್ಯ ಕಲ್ಪಿಸುವುದು, ಮಂಡನಾಧಿಕಾರಿಗೆ ದಾಖಲೆ, ಸಾಕ್ಷ್ಯಗಳ ನೆರವು ಒದಗಿಸುವ ಕೆಲಸವನ್ನು ಸಮನ್ವಯ ಅಧಿಕಾರಿ ನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ.

ADVERTISEMENT

ಮಂಡನಾಧಿಕಾರಿಯು ಸಕಾಲಕ್ಕೆ ವಾದ ಮಂಡಿಸಬೇಕು. ಸಾಕ್ಷಿಗಳು ವಿಚಾರಣೆಗೆ ಹಾಜರಾಗಿ ಸಾಕ್ಷ್ಯ ನುಡಿಯುವಂತೆ ಕ್ರಮ ಕೈಗೊಳ್ಳಬೇಕು. ಸಾಕ್ಷ್ಯ ನುಡಿಯಲು ಗೈರಾಗುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.