ADVERTISEMENT

ದೇಸಿ ತಳಿ ಬೀಜ ವೈವಿಧ್ಯ ನೋಂದಣಿ ಮಾಡಿಸಿ: ಡಾ. ತ್ರಿಲೋಚನ ಮಹಾಪಾತ್ರ

ದೇಸಿ ಬೀಜೋತ್ಸವ: ಪಿಪಿವಿಎಫ್ಆರ್‌ಎ ಅಧ್ಯಕ್ಷ ತ್ರಿಲೋಚನ ಮಹಾಪಾತ್ರ ಕರೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 16:04 IST
Last Updated 14 ಜೂನ್ 2025, 16:04 IST
ದಿನೇಶಕುಮಾರ ಅಗರವಾಲ್, ತ್ರಿಲೋಚನ ಮಹಾಪಾತ್ರ, ಜಿ.ಕೃಷ್ಣಪ್ರಸಾದ್, ಎ.ಬಿ.ಪಾಟೀಲ ಅವರಿಗೆ ದೇಸಿ ಬೀಜಸಂರಕ್ಷಕ ಶಂಕರ ಲಂಗಟಿ ಅವರು ತಮ್ಮಲ್ಲಿರುವ ದೇಸಿ ಭತ್ತದ ತಳಿಗಳ ಕುರಿತು ಮಾಹಿತಿ ನೀಡಿದರು.
ದಿನೇಶಕುಮಾರ ಅಗರವಾಲ್, ತ್ರಿಲೋಚನ ಮಹಾಪಾತ್ರ, ಜಿ.ಕೃಷ್ಣಪ್ರಸಾದ್, ಎ.ಬಿ.ಪಾಟೀಲ ಅವರಿಗೆ ದೇಸಿ ಬೀಜಸಂರಕ್ಷಕ ಶಂಕರ ಲಂಗಟಿ ಅವರು ತಮ್ಮಲ್ಲಿರುವ ದೇಸಿ ಭತ್ತದ ತಳಿಗಳ ಕುರಿತು ಮಾಹಿತಿ ನೀಡಿದರು.   

ಬೆಂಗಳೂರು: ‘ಸಮುದಾಯಗಳು ತಲೆಮಾರುಗಳಿಂದ ಉಳಿಸಿಕೊಂಡು ಬಂದಿರುವ ದೇಸಿ ತಳಿಯ ಬೀಜ ವೈವಿಧ್ಯವನ್ನು ನೋಂದಣಿ ಮಾಡಿಸಿ, ಆ ಮೂಲಕ, ಮುಂದಿನ ಪೀಳಿಗೆಗೂ ಸಂರಕ್ಷಿಸಿ ಕೊಡಬೇಕಿದೆ’ ಎಂದು ಭಾರತೀಯ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರದ (ಪಿಪಿವಿಎಫ್ಆರ್‌ಎ) ಅಧ್ಯಕ್ಷ ಡಾ. ತ್ರಿಲೋಚನ ಮಹಾಪಾತ್ರ ಕರೆ ನೀಡಿದರು.

ನಗರದ ಕೃಷಿ ತಂತ್ರಜ್ಞರ ಸಂಸ್ಥೆ(ಐಎಟಿ)ಯು `ಸಹಜ ಸಮೃದ್ಧ’ ಸಾವಯವ ಕೃಷಿಕರ ಬಳಗ ಜತೆಗೂಡಿ ‘ಕ್ರಾಪ್ಸ್4ಎಚ್ಡಿ’ ಹಾಗೂ ‘ಕೀ ಸ್ಟೋನ್’ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ‘ದೇಸಿ ಬೀಜೋತ್ಸವ’ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯು ತಂತ್ರಜ್ಞಾನ, ಅಧಿಕ ಇಳುವರಿ, ಪೋಷಕಾಂಶ ಹಾಗೂ ಹವಾಮಾನ ಬದಲಾವಣೆಯಂಥ ಹಲವು ವಿಷಯಗಳ ಮೇಲೆ ಅವಲಂಬಿತವಾಗಿದೆ. ಇದರಲ್ಲಿ ಯಾವುದೇ ಒಂದು ಅಂಶ ಹೆಚ್ಚು ಕಡಿಮೆಯಾದರೂ ಆಹಾರ ಉತ್ಪಾದನೆ ಏರುಪೇರಾಗುತ್ತದೆ. ಆದರೆ ಇದೆಲ್ಲದರ ಮೂಲ ಹಾಗೂ ಕೇಂದ್ರ ಬಿಂದು ಬೀಜದಲ್ಲಿದೆ. ಹೀಗಾಗಿಯೇ ಗುಣಮಟ್ಟದ ಬೀಜಗಳ ಉತ್ಪಾದನೆ ಹಾಗೂ ತಳಿ ಸಂರಕ್ಷಣೆಗೆ ಬಗ್ಗೆ ಹೆಚ್ಚು ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ. ಎ.ಬಿ. ಪಾಟೀಲ ‘ಹವಾಮಾನ ವೈಪರೀತ್ಯವನ್ನು ಎದುರಿಸಿ ಬೆಳೆಯುವ ದೇಸಿ ಬೀಜಗಳನ್ನು ಹೆಚ್ಚೆಚ್ಚು ಪ್ರದೇಶಕ್ಕೆ ವಿಸ್ತರಿಸಬೇಕು’ ಎಂದು ಸಲಹೆ ನೀಡಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಸುರೇಶ ಎಸ್.ವಿ., ಕೃಷಿ ವಿಜ್ಞಾನಿ ಎನ್. ದೇವಕುಮಾರ್, ಪಿಪಿಪಿವಿಎಫ್ಆರ್‌ಎ ರಿಜಿಸ್ಟ್ರಾರ್ ಜನರಲ್ ದಿನೇಶಕುಮಾರ ಅಗರವಾಲ್, ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ. ಅನೂಪ್, ಬೀಜ ಸಂರಕ್ಷಕಿ ಕಮಲಮ್ಮ, ‘ಸಹಜ ಸಮೃದ್ಧ’ದ ಅಧ್ಯಕ್ಷ ಶಿವನಾಪುರ ರಮೇಶ ಹಾಗೂ ‘ಸ್ವಿಸ್ ಏಡ್’ ಸಂಸ್ಥೆಯ ಪ್ರತಿನಿಧಿ ಕವಿತಾ ಗಾಂಧಿ ಉಪಸ್ಥಿತರಿದ್ದರು.

ದೇಸಿ ತಳಿಗಳ ಸಂರಕ್ಷಣೆಗೆ ಶ್ರಮಿಸಿದ ವಿಜ್ಞಾನಿಗಳಾದ ಎನ್.ಜಿ. ಹನುಮರಟ್ಟಿ, ಜಯಪ್ರಕಾಶ ನಿಡಗುಂದಿ, ಉಲ್ಲಾಸ್ ಎಂ.ವೈ., ಬೀಜಮಾತೆ ಪಾಪಮ್ಮ ಹಾಗೂ ವಿನಾಯಕ ಸ್ತ್ರೀಶಕ್ತಿ ಸಂಘದ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ಬೀಜೋತ್ಸವದಲ್ಲಿ..

ವಿವಿಧ ರಾಜ್ಯಗಳ 200ಕ್ಕೂ ಹೆಚ್ಚು ಬೀಜ ಸಂರಕ್ಷಕರು ಪಾಲ್ಗೊಂಡಿದ್ದಾರೆ. 50 ಮಳಿಗೆಗಳಿವೆ. ಪಶ್ಚಿಮ ಬಂಗಾಳದ ಬೇಳೆ ಕಾಳು ಒಡಿಶಾದ ಭತ್ತಗಳು ಕೇರಳದ ವಯನಾಡಿನ ಗಡ್ಡೆ ಗೆಣಸುಗಳು ಕುಂದುಗೋಳದ ಸಿರಿಧಾನ್ಯಗಳನ್ನು ಪ್ರದರ್ಶಿಸಲಾಗಿದೆ. ತಾರಸಿ ತೋಟ ಮನೆ ಅಂಗಳದ ಕೈತೋಟಕ್ಕೆ ಹೊಂದುವಂತಹ ಅಪರೂಪದ ದೇಸಿ ತರಕಾರಿ ಬೀಜಗಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.