ADVERTISEMENT

ಕ್ಷಣಾರ್ಧದಲ್ಲಿ ನರದೌರ್ಬಲ್ಯ ಪತ್ತೆ

ಮಧುಮೇಹ: ಕ್ಲಿನಿಕ್‌ಗಳಲ್ಲಿಯೂ ಪರೀಕ್ಷೆ ಮಾಡಿಸಿಕೊಳ್ಳುವ ಅವಕಾಶ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 19:54 IST
Last Updated 23 ಸೆಪ್ಟೆಂಬರ್ 2019, 19:54 IST
ನ್ಯೂರೊ ಟಚ್ ಯಂತ್ರ
ನ್ಯೂರೊ ಟಚ್ ಯಂತ್ರ   

ಬೆಂಗಳೂರು: ಮಧುಮೇಹ ರೋಗದಿಂದ ಉಂಟಾಗುವ ನರಗಳ ದೌರ್ಬಲ್ಯವನ್ನು (ಡಯಾಬಿಟಿಕ್ ನ್ಯೂರೋಪಥಿ) ಆರಂಭಿಕ ಹಂತದಲ್ಲಿಯೇ ಸುಲಭವಾಗಿ ಪತ್ತೆ ಮಾಡುವ ಯಂತ್ರವನ್ನು ಆವಿಷ್ಕಾರ ಮಾಡಲಾಗಿದ್ದು, ಇನ್ನು ಮುಂದೆ ಪರೀಕ್ಷೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ತೆರಳಬೇಕಾಗಿಲ್ಲ.

ಮಧುಮೇಹಕ್ಕೆ ಒಳಗಾದ ಬಹುತೇಕರ ಕಾಲು ಹಾಗೂ ಪಾದಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದೆ. ಒಂದು ವೇಳೆ ಪರೀಕ್ಷೆ ವಿಳಂಬವಾದರೆ ನರಗಳಿಗೆ ಗಂಭೀರ ಹಾನಿಯಾಗಲಿದ್ದು, ವ್ಯಕ್ತಿ ಶಾಶ್ವತವಾಗಿ ಕಾಲನ್ನು ಕಳೆದುಕೊಳ್ಳುವ ಸಾಧ್ಯತೆಗಳು ಇರಲಿವೆ. ಅಷ್ಟೇ ಅಲ್ಲ, ಮಿದುಳು ಹಾಗೂ ಬೆನ್ನುಹುರಿಗೆ ಸಹ ಹಾನಿಯಾಗುತ್ತದೆ. ಆದರೆ, ಎಲ್ಲೆಡೆ ಪರೀಕ್ಷೆ ಲಭ್ಯವಿರದ ಹಿನ್ನೆಲೆಯಲ್ಲಿಡಯಾಬಿಟಿಕ್ ನ್ಯೂರೋಪಥಿ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗುವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಎಂಬಂತೆ ನಗರದಯೋಸ್ಟ್ರಾ ಎಂಬ ನವೋದ್ಯಮ ‘ನ್ಯೂರೊ ಟಚ್ ’ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದೆ.

ಸದ್ಯ ಬೃಹದಾಕಾರದ ಯಂತ್ರದ (ಹಳೆಯ ಕಾಲದ ವಿಡಿಯೊ ರೆಕಾರ್ಡರ್ ಗಾತ್ರ) ನೆರವಿನಿಂದ ಡಯಾಬಿಟಿಕ್ ನ್ಯೂರೋಪಥಿ ಪರೀಕ್ಷೆ ಮಾಡಲಾಗುತ್ತಿದೆ.

ADVERTISEMENT

ಕ್ಲಿನಿಕ್‌ಗಳಲ್ಲಿಯೂ ಪರಿಚಯ: ‘ನ್ಯೂರೊ ಟಚ್’ ಯಂತ್ರದ ಸಂಶೋಧನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗುರುತಿಸಿದ್ದು, ಹೆಚ್ಚಿನ ಸಂಶೋಧನೆಗೆ ಆರ್ಥಿಕ ಸಹಕಾರ ನೀಡಿದೆ. ಪ್ರಾಯೋಗಿಕವಾಗಿ ಕರ್ನಾಟಕ ಡಯಾಬಿಟಿಸ್‌ ಕೇಂದ್ರ ಹಾಗೂ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಪರಿಚಯಿಸಲಾಗಿದೆ.

‘ಡಯಾಬಿಟಿಕ್ ನ್ಯೂರೋಪಥಿಯ ಪರೀಕ್ಷೆ ಕ್ಲಿನಿಕ್‌ಗಳಲ್ಲಿ ಕೂಡಾ ನಡೆಯುವಂತಾಗಬೇಕೆಂಬ ಉದ್ದೇಶ ದಿಂದ ಸಂಶೋಧಿಸಲಾಗಿದೆ. ಕ್ಲಿನಿಕ್‌ಗಳಿಗೆ ಕೂಡಾ ಪರಿಚಯಿಸ ಲಾಗುತ್ತದೆ. ಈಗಾಗಲೇ ಕೆಲ ಕ್ಲಿನಿಕ್‌ಗಳು ಸಂಪರ್ಕಿಸಿವೆ’ ಎಂದು ಯೋಸ್ಟ್ರಾ ಸಂಸ್ಥೆಯ ಸಹ ಸಂಸ್ಥಾಪಕ ವಿನಾಯಕ್ ನಂದಲಿಕೆ ತಿಳಿಸಿದರು.

ನಾಲ್ಕು ಮಾದರಿ ಪರೀಕ್ಷೆ

ನೂತನ ಯಂತ್ರ ‘ನ್ಯೂರೊ ಟಚ್’ ಸಹಾಯದಿಂದನಾಲ್ಕು ಮಾದರಿಯ ಪರೀಕ್ಷೆ ಮಾಡಬಹುದಾಗಿದೆ. ಮೊನೊಫಿಲೇಮೆಂಟ್ ಟೆಸ್ಟ್, ಕಂಪನ ಗ್ರಹಿಕೆ ಪರೀಕ್ಷೆ, ಬಿಸಿ ಮತ್ತು ಶೀತ ಗ್ರಹಿಕೆ ಪರೀಕ್ಷೆ ಮಾಡಬಹುದಾಗಿದೆ. ಪಾದದ ಚರ್ಮದ ತಾಪಮಾನವನ್ನು ನಿಖರವಾಗಿ ಅಳೆಯಬಲ್ಲ ಡಿಜಿಟಲ್ ಅತಿಗೆಂಪು ಥರ್ಮಾಮೀಟರ್ ಸಹ ಯಂತ್ರದಲ್ಲಿ ಇರಲಿದೆ.

‘ಇದು ವಿನೂತನ ಆವಿಷ್ಕಾರವಾಗಿದ್ದು, ಆರಂಭಿಕ ಹಂತದಲ್ಲಿಯೇ ನ್ಯೂರೋಪಥಿ ಪತ್ತೆ ಹಾಗೂ ದೇಹದ ತಾಪಮಾನದ ಏರಿಳಿತದ ಪರೀಕ್ಷೆಗೆ ಸಹಾಯಕವಾಗಿದೆ. ಇನ್ಫ್ರಾ ರೆಡ್‌ ಸೇರಿದಂತೆ ವಿವಿಧ ಉಪಕರಣಗಳನ್ನು ನ್ಯೂರೋ‍ಪಥಿ ಪತ್ತೆಗೆ ಬಳಸಲಾಗುತಿತ್ತು. ಇದೀಗ ಒಂದೇ ಯಂತ್ರದ ಸಹಾಯದಿಂದ ವಿವಿಧ ಪರೀಕ್ಷೆ ಮಾಡಬಹುದಾಗಿದೆ’ ಎಂದು ಮಣಿಪಾಲ್ ಆಸ್ಪತ್ರೆಯ ಡಯಾಬಿಟಿಕ್ಫುಟ್‌ ಕೇರ್ ಆ್ಯಂಡ್ ರಿಸರ್ಚ್‌ ಸೆಂಟರ್‌ನ ಮುಖ್ಯಸ್ಥ ಡಾ. ಅರುಣ್ ಮಯ್ಯ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.