ಬೆಂಗಳೂರು: ದೇವನಹಳ್ಳಿ– ವಿಜಯಪುರ– ಎಚ್. ಕ್ರಾಸ್– ವೇಮಗಲ್– ಮಾಲೂರು– ತಮಿಳುನಾಡು ಗಡಿಯವರೆಗೆ ಕೈಗಾರಿಕಾ ಸಂಪರ್ಕ ಕಲ್ಪಿಸುವ 123 ಕಿ.ಮೀ. ಉದ್ದದ ರಸ್ತೆಗೆ ಕಾಮಗಾರಿಗೆ ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಎಂ.ಎಲ್. ಅನಿಲ್‌ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ನಾಲ್ಕು ಅಥವಾ ಆರು ಪಥದ ರಸ್ತೆಯನ್ನು ಪಿಪಿಪಿ ಹೈಬ್ರಿಡ್ ಆ್ಯನ್ಯೂಟಿ ಮಾದರಿಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ₹1,826 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಇದರ ಡಿಪಿಆರ್ ಇನ್ನು ಒಂದು ವಾರದಲ್ಲಿ ಸಲ್ಲಿಕೆಯಾಗಲಿದೆ’ ಎಂದು ಮಾಹಿತಿ ನೀಡಿದರು.
‘2023–24ರ ಆಯವ್ಯಯದಲ್ಲಿ ಈ ರಸ್ತೆ ಯೋಜನೆಯನ್ನು ಘೋಷಣೆ ಮಾಡಲಾಗಿದ್ದು, ಇನ್ನೂ ಟೆಂಡರ್ ಆಹ್ವಾನಿಸಿಲ್ಲ. ಯಾವಾಗ ಪ್ರಕ್ರಿಯೆ ಮುಗಿಯುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಅನಿಲ್‌ಕುಮಾರ್ ಆಗ್ರಹಿಸಿದರು.
‘ಇನ್ನು ಮೂರು ತಿಂಗಳಲ್ಲಿ ಟೆಂಡರ್ ಆಹ್ವಾನಿಸಿ, ಶೀಘ್ರದಲ್ಲಿ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ಸಚಿವರು ಭರವಸೆ ನೀಡಿದರು.
‘ಹೈಬ್ರಿಡ್ ವರ್ಷಾಸನ ಮಾದರಿ ಯೋಜನೆಯಲ್ಲಿ ಮೂರು ವರ್ಷ ನಿರ್ಮಾಣ ಅವಧಿ ಹಾಗೂ 12 ವರ್ಷ ಕಾರ್ಯಾಚರಣೆ ಮತ್ತು ನಿರ್ವಹಣೆ ಅವಧಿಯನ್ನು ನಿಗದಿಪಡಿಸಲಾಗಿದೆ. ಶೇ 40ರಷ್ಟು ಮೊತ್ತವನ್ನು ಕಾಮಗಾರಿಗೆ ಅನುಗುಣವಾಗಿ ಪಾವತಿಸಲಾಗುತ್ತದೆ. ಉಳಿದ ಶೇ 60ರಷ್ಟನ್ನು ಗುತ್ತಿಗೆದಾರರು ಹೂಡಿಕೆ ಮಾಡಬೇಕಾಗುತ್ತದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.