
ದೇವನಹಳ್ಳಿ: ಗಾಂಜಾ ಮತ್ತಿನಲ್ಲಿ ಮಂಗಳವಾರ ತಡರಾತ್ರಿ ರೈಲು ಹಳಿ ಬಳಿ ಮಲಗಿದ್ದ ಯವಕನೊಬ್ಬನ ಕೈ ಮೇಲೆ ರೈಲು ಹರಿದು ಎಡಗೈ ತುಂಡಾಗಿದೆ. ಗಾಂಜಾ ಮತ್ತಿನಲ್ಲಿ ಕೈ ತುಂಡಾದ ನೋವಿನ ಅರಿವು ಇಲ್ಲದೆ ಯುವಕ ರಕ್ತ ಸೋರಿಸುತ್ತ ರಸ್ತೆಗಳಲ್ಲಿ ಓಡಾಡಿದ್ದಾನೆ.
ಉತ್ತರ ಭಾರತದದ ದಿಲೀಪ್ ಕೈ ಕಳೆದುಕೊಂಡ ಯುವಕ. ತುಂಡಾದ ಕೈಯಿಂದ ಇಳಿಬಿದ್ದ ರಕ್ತನಾಳ, ನರಗಳೊಂದಿಗೆ ರಕ್ತ ಸೋರಿಸುತ್ತ ದೇವನಹಳ್ಳಿ ಹಳೆ ಬಸ್ ನಿಲ್ದಾಣದಿಂದ ಕುಂಬಾರ ಬೀದಿ ಕಡೆಗೆ ನಡೆದುಕೊಂಡು ಹೋದ. ಯುವಕನಿಗೆ ತನ್ನ ಅರ್ಧ ಕೈ ತುಂಡಾಗಿದೆ ಎಂಬ ಪ್ರಜ್ಞೆಯೇ ಇರಲಿಲ್ಲ. ಮುಖದಲ್ಲಿ ಒಂದಿಷ್ಟೂ ನೋವಿನ ಛಾಯೆ ಕಾಣಲಿಲ್ಲ.
ಆತನ ಸ್ಥಿತಿಯನ್ನು ಕಂಡ ಸಾರ್ವಜನಿಕರು ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು. ಆದರೆ, ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ವೇಳೆ ಯುವಕ ಮೂರು ಬಾರಿ ಆಂಬ್ಯುಲೆನ್ಸ್‌ನಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಸಾರ್ವಜನಿಕರ ನೆರವಿನೊಂದಿಗೆ ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿ ಆತನನ್ನು ಒಂದು ತಾಸು ಸಾಹಸ ಪಟ್ಟು ಹಿಡಿದು ದೇವನಹಳ್ಳಿ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ಹೋಗಲು ನಿರಾಕರಿಸಿದ ಅತನ ಮನವೊಲಿಸಿ ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿಗೆ ಸಾಕು ಬೇಕಾಯಿತು.
ಗಾಂಜಾ ಮತ್ತಿನಲ್ಲಿದ್ದ ಆತ ಆಸ್ಪತ್ರೆಗೆ ಹೋದ ನಂತರವೂ ಚಿಕಿತ್ಸೆ ಪಡೆಯಲು ಮೊಂಡಾಟ ಮಾಡಿದ. ‘ನನ್ನ ಬಳಿ ಹಣವಿಲ್ಲ. ಚಿಕಿತ್ಸೆ ಬೇಡ’ ಎಂದು ಪಟ್ಟು ಹಿಡಿದಿದ್ದ. ಬಳಿಕ ಪೊಲೀಸರು ಬುದ್ಧಿವಾದ ಹೇಳಿ ಮನವೊಲಿಸಿದ ನಂತರ ಗಾಯಗೊಂಡ ಕೈಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.