ADVERTISEMENT

ಅಭಿವೃದ್ಧಿ ಕೇಂದ್ರಿತ ಬಜೆಟ್‌: ಎಫ್‍ಕೆಸಿಸಿಐ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 15:44 IST
Last Updated 1 ಫೆಬ್ರುವರಿ 2024, 15:44 IST
ರಮೇಶ್‌ ಚಂದ್ರ ಲಹೋಟಿ
ರಮೇಶ್‌ ಚಂದ್ರ ಲಹೋಟಿ   

ಬೆಂಗಳೂರು: ಕೇಂದ್ರದ ಮಧ್ಯಂತರ ಬಜೆಟ್‌, ದೇಶದಲ್ಲಿ ಉತ್ಪಾದನೆಯ ಮೂಲ ಸೌಕರ್ಯ ಹೆಚ್ಚಿಸಲು ನೆರವಾಗಲಿದ್ದು ಆಡಳಿತ, ಅಭಿವೃದ್ಧಿ ಹಾಗೂ ಕಾರ್ಯಕ್ಷಮತೆಯ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸಿದೆ ಎಂದು ಎಫ್‍ಕೆಸಿಸಿಐ ಹೇಳಿದೆ.

2024–25ನೇ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 6.5ರಿಂದ ಶೇ 5.8ಕ್ಕೆ ಇಳಿಸಲಾಗಿದೆ. ಇದರಿಂದ ಬಜೆಟ್ ಬೆಳವಣಿಗೆಯ ಮಾನದಂಡಗಳನ್ನು ಪೂರೈಸುವ ನಿರೀಕ್ಷೆಯಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಹೇಳಿದ್ದಾರೆ.

ಮಹಿಳೆಯರು, ಯುವಕರು, ರೈತರು ಮತ್ತು ಬಡವರನ್ನು ಒಳಗೊಂಡ ನಾಲ್ಕು ವರ್ಗದ ಆದ್ಯತಾ ಕ್ಷೇತ್ರಗಳ ಮೇಲೆ ಆಯವ್ಯಯವನ್ನು ಕೇಂದ್ರೀಕರಿಸಲಾಗಿದೆ. ಇದು ಹಣಕಾಸು ಗಾತ್ರಕ್ಕಿಂತ ಗುಣಮಟ್ಟದ ಬೆಳವಣಿಗೆಯ ಗುರಿ ಹೊಂದಿದೆ ಎಂದು ಹೇಳಿದ್ದಾರೆ.

ಯಾವುದೇ ಹೆಚ್ಚುವರಿ ತೆರಿಗೆಗಳನ್ನು ವಿಧಿಸದಿರುವುದು ಸ್ವಾಗತಾರ್ಹ. ಸಂಪರ್ಕ, ಮೂಲ ಸೌಕರ್ಯ ಮತ್ತು ರೈಲ್ವೆ ಕಾರಿಡಾರ್‌ಗೆ ಆದ್ಯತೆ ಸಿಕ್ಕಿದೆ. ಯುರೋಪಿಗೆ ಉದ್ದೇಶಿತ ಮಧ್ಯಪ್ರಾಚ್ಯ ಕಾರಿಡಾರ್ ನಿರ್ಮಾಣವು ಉತ್ತಮ ಹೆಜ್ಜೆಯಾಗಿದೆ. ಇದು ದೇಶದ ಆರ್ಥಿಕ ಬೆಳವಣಿಗೆ ವೃದ್ಧಿಗೆ ಸಹಕಾರಿಯಾಗಿದೆ ಎಂದಿದ್ದಾರೆ. 

ADVERTISEMENT

ರೈಲು ಮತ್ತು ರಸ್ತೆ ಸಂಪರ್ಕ ಹೆಚ್ಚಿಸುವ ಮೂಲಕ ಪ್ರವಾಸೋದ್ಯಮದ ಉತ್ತೇಜನಕ್ಕೆ ಒತ್ತು ನೀಡಿರುವುದು ಉತ್ತಮ ಬೆಳವಣಿಗೆ. ಇದರಿಂದ ಜನರು ದೇಶದಲ್ಲಿಯೇ ಮದುವೆ ಸಮಾರಂಭ ಅಥವಾ ರಜಾ ದಿನಗಳಲ್ಲಿ ಹಣ ವ್ಯಯಿಸಲು ಅನುವು ಮಾಡಿಕೊಡುತ್ತದೆ. ಇದು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.