ADVERTISEMENT

ಅನುದಾನದ ಕೊರತೆಯಿಂದ ಅಭಿವೃದ್ಧಿಗೆ ಹಿನ್ನಡೆ: ಬೈರತಿ ಬಸವರಾಜ

​ಪ್ರಜಾವಾಣಿ ವಾರ್ತೆ
Published 4 ಮೇ 2025, 21:15 IST
Last Updated 4 ಮೇ 2025, 21:15 IST
ಬೈರತಿ ಬಸವರಾಜ
ಬೈರತಿ ಬಸವರಾಜ   

ಕೆ.ಆರ್.ಪುರ: ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಅನುದಾನದ ಕೊರತೆ ಉಂಟಾಗಿದೆ ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.

ಕ್ಷೇತ್ರದ ವಿಜ್ಞಾನನಗರ ವಾರ್ಡ್‌ನ ಮಹದೇವಪುರ, ಅಬ್ಬಯ್ಯರೆಡ್ಡಿ ಬಡಾವಣೆ, ಕಾಳಪ್ಪ ಬಡಾವಣೆ, ತಲಕಾವೇರಿ ಬಡಾವಣೆ ಎಚ್.ಎ.ಎಲ್ ವಾರ್ಡಿನ ವೀರಭದ್ರ ನಗರ, ಶಾಸ್ತ್ರಿನಗರ, ಶಿವಾನಂದ ಬಡಾವಣೆಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

‘ಕ್ಷೇತ್ರದಲ್ಲಿ ವಿವಿಧ ಮೂಲಸೌಕರ್ಯ ಕಲ್ಪಿಸಲು ಸಾಕಷ್ಟು ಅನುದಾನದ ಅಗತ್ಯವಿದೆ. ಆದರೆ ಕಾಂಗ್ರೆಸ್ ನೇತೃತ್ವದ ರಾಜ್ಯ‌ ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ನೀಡದೆ ತಾರತಮ್ಯ ಮಾಡುತ್ತಿದೆ. ಇದರಿಂದ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲು ಆಗುತ್ತಿಲ್ಲ. ಹೀಗಾಗಿ, ಕ್ಷೇತ್ರದ ಮತದಾರರಿಗೆ ಅಭಿವೃದ್ಧಿ ವಿಚಾರದಲ್ಲಿ ಉತ್ತರಿಸಲು ಕಷ್ಟ ಸಾಧ್ಯವಾಗಿದೆ’ ಎಂದರು.

ADVERTISEMENT

‘ಕ್ಷೇತ್ರದಲ್ಲಿ ಮೂಲಸೌಕರ್ಯ ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಈಗ ಸಿಕ್ಕಿರುವ ಅಲ್ಪ ಪ್ರಮಾಣದ ಅನುದಾನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಗೀತಾ ವಿವೇಕಾನಂದ, ಮಾರ್ಕೆಟ್ ರಮೇಶ್, ಎಸ್.ಜಿ.ನಾಗರಾಜ್, ಸಿದ್ದಲಿಂಗಯ್ಯ, ಶ್ರೀಕಾಂತ್, ಕೃಷ್ಣಪ್ಪ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.