ಧರ್ಮರಾಯಸ್ವಾಮಿ ದೇವಸ್ಥಾನ
ಸಾಂದರ್ಭಿಕ ಚಿತ್ರ
ಬೆಂಗಳೂರು: ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯಕ್ಕೆ ಸೇರಿರುವ ಆಸ್ತಿಯಲ್ಲಿ 211 ಒತ್ತುವರಿದಾರರನ್ನು ಗುರುತಿಸಲಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಇದನ್ನು ತೆರವುಗೊಳಿಸಿ, ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಎನ್. ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಧರ್ಮರಾಯಸ್ವಾಮಿ ದೇವಾಲಯಕ್ಕೆ ಸೇರಿದ ನೀಲಸಂದ್ರ ಗ್ರಾಮದ ಸರ್ವೆ ನಂ. 79ರಲ್ಲಿ 15 ಎಕರೆ 12 ಗುಂಟೆ ಜಾಗವಿದೆ. 1989ರಲ್ಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, 1990ರ ತೀರ್ಪಿನಂತೆ, 1992ರಲ್ಲಿ ಉತ್ತರ ತಾಲ್ಲೂಕಿನ ತಹಶೀಲ್ದಾರ್ ಅವರು ಮುಜರಾಯಿ ಸಹಾಯಕರಿಗೆ ಜಮೀನು ಹಸ್ತಾಂತರಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಈ ಜಮೀನನ್ನು ಇಲಾಖೆಗೆ ಹಸ್ತಾಂತರಿಸುವ ಪೂರ್ವದಲ್ಲೇ ಒತ್ತುವರಿ ಇದ್ದು, 2015ರಲ್ಲಿ ಸರ್ವೆ ನಡೆಸಿದಾಗ 211 ಒತ್ತುವರಿದಾರರು 6 ಎಕರೆ 12 ಗುಂಟೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ಕಂಡುಬಂದಿದೆ. ಭೂ ಕಬಳಿಕೆ ನಿಷೇಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಇತ್ಯರ್ಥ ಬಾಕಿ ಇದೆ. 2011–12ರಿಂದ 2022–23ರವರೆಗೆ ಎಂ. ಮೋಹನ್ ಕುಮಾರ್, ಜೆ. ಪುರುಷೋತ್ತಮ್, ಎಂ. ನಾರಾಯಣಸ್ವಾಮಿ, ಟಿ. ಸೆಲ್ವಮಣಿ, ಟಿ.ಎನ್. ಮಂಜುಳಾ, ವಿ. ಶ್ರೀನಿವಾಸ ಮೂರ್ತಿ ಅವರ ಕರ್ತವ್ಯ ಲೋಪದಿಂದ ಒತ್ತುವರಿಯಾಗಿರುವುದು ಕಂಡುಬಂದಿದ್ದು, ಲೋಪ ಸಾಬೀತಾದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಈ ಉತ್ತರವನ್ನು ಒಪ್ಪದ ರವಿಕುಮಾರ್ ಅವರು, ‘ಇಲಾಖೆ ವಶದಲ್ಲೇ ಇರುವ ಒಂಬತ್ತು ಎಕರೆ ಜಮೀನಿಗೆ ಕಾಂಪೌಂಡ್ ನಿರ್ಮಿಸಲು 2017ರಲ್ಲಿ ಹಣ ಬಿಡುಗಡೆ ಮಾಡಿದ್ದರೂ ಕಾಮಗಾರಿ ನಡೆದಿಲ್ಲ. ಅಧಿಕಾರಿಗಳು, ಗುತ್ತಿಗೆದಾರರು ಒಳಒಪ್ಪಂದ ಮಾಡಿಕೊಂಡಿದ್ದಾರೆಯೇ? ನಿಮ್ಮ ಉತ್ತರ ಸಮರ್ಥವಾಗಿಲ್ಲ. ಕೂಡಲೇ ಕ್ರಮವಾಗಬೇಕು’ ಎಂದು ಆಗ್ರಹಿಸಿ ಸಭಾಪತಿಯವರ ಪೀಠದ ಮುಂದೆ ಬಂದು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ವಾದ–ವಿವಾದಗಳು ನಡೆದವು. ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು, ‘ಸ್ಪಷ್ಟ ಭರವಸೆ ಕೊಡಬೇಕು’ ಎಂದು ಆಗ್ರಹಿಸಿದರು.
‘ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಕಾಲಮಿತಿಯಲ್ಲಿ ತೆರವುಗೊಳಿಸಲು ಅಡ್ವೊಕೇಟ್ ಜನರಲ್ ಅವರೊಂದಿಗೆ ಮಾತುಕತೆ ನಡೆಸಲಾಗುತ್ತದೆ. ಕೆಆರ್‌ಐಡಿಎಲ್ ಅವರಿಗೆ ಕಾಂಪೌಂಡ್ ನಿರ್ಮಿಸಲು ಹಣ ಬಿಡುಗಡೆ ಮಾಡಲಾಗಿದ್ದು, ಆ ಕಾಮಗಾರಿ ನಡೆಸಲೂ ಸೂಚಿಸಲಾಗುತ್ತದೆ’ ಎಂದು ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.