ADVERTISEMENT

ಬೆಂಗಳೂರು | ‘ಸುಪ್ರೀಂ’ ಮೇಲ್ವಿಚಾರಣೆಯಲ್ಲಿ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 21:20 IST
Last Updated 21 ಜುಲೈ 2025, 21:20 IST
   

ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ ನಡೆದಿದೆ ಎನ್ನಲಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ತನಿಖೆಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಸಮಾನ ಮನಸ್ಕರ ವೇದಿಕೆ ಒತ್ತಾಯಿಸಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ನೇತೃತ್ವದಲ್ಲಿ ಸೋಮವಾರ ಇಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಈ ವಿಷಯದಲ್ಲಿ ನ್ಯಾಯ ಸಿಗುವವರೆಗೂ ಪಕ್ಷಾತೀತವಾಗಿ ಹೋರಾಟ ನಡೆಸಬೇಕು. ಅಗತ್ಯ ಬಿದ್ದರೆ ವಿಧಾನಸೌಧ ಚಲೋ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸರ್ಕಾರ ಮತ್ತು ಎಸ್‌ಐಟಿ ಮೇಲೆ ಒತ್ತಡ ತರದಿದ್ದರೆ ಈ ಪ್ರಕರಣದಲ್ಲಿ ನ್ಯಾಯ ಸಿಗುವುದಿಲ್ಲ. ಈ ವಿಷಯದಲ್ಲಿ ತನಿಖೆ ನಡೆಸಲು ಸರ್ಕಾರಕ್ಕೆ ಮುಕ್ತ ಮನಸ್ಸಿಲ್ಲ. ಜನಾಭಿಪ್ರಾಯಕ್ಕೆ ಮಣಿದು ಎಸ್‌ಐಟಿ ರಚಿಸಿದೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟವನ್ನು ಮುಂದುವರಿಸಲು ತೀರ್ಮಾನಿಸಲಾಯಿತು. ನಿರ್ಭಯ ಪ್ರಕರಣದಲ್ಲಿ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಆಂದೋಲನ ನಡೆಯಿತು. ಅದೇ ಮಾದರಿಯಲ್ಲಿ ಹೋರಾಟ ಮಾಡಬೇಕೆಂದು ಸಭೆಯಲ್ಲಿ ಭಾಗಹಿಸಿದ್ದವರು ಸಲಹೆ ನೀಡಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲ ಡಾ.ಸಿ.ಎಸ್.ದ್ವಾರಕಾನಾಥ್, 'ಗೌರಿ ಲಂಕೇಶ್ ಹತ್ಯೆ ನಡೆದು ಸುಮಾರು 7 ವರ್ಷಗಳಾಗಿವೆ. ಆರೋಪಿಗಳು ಹೊರಗಡೆಯೇ ಇದ್ದಾರೆ. ಇನ್ನೂ ವಿಚಾರಣೆ ಮುಗಿದಿಲ್ಲ. ಧರ್ಮಸ್ಥಳ ಪ್ರಕರಣದ ವಿಚಾರಣೆಗಾಗಿ ವಿಶೇಷ ತ್ವರಿತ ನ್ಯಾಯಾಲಯ ರಚಿಸಬೇಕು ಎಂದು ಆಗ್ರಹಿಸಿದರು.

ಉಗ್ರಪ್ಪ ನೇತೃತ್ವದ ಆಯೋಗದ  ವರದಿಯ ಪ್ರಕಾರ 467 ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ. 2018ರಲ್ಲೇ ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಅದರಲ್ಲಿ ಕೇರಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯದವರೂ ಇರಬಹುದು. ಆದರೆ ಕರ್ನಾಟಕದವರು ಹೆಚ್ಚು ಜನರು ಇದ್ದಾರೆ ಎಂದರು.

ಅಂಕಣಕಾರ ಶಿವಸುಂದರ್, ಪ್ರಾಧ್ಯಾಪಕ ಎ.ನಾರಾಯಣ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ, ಹೋರಾಟಗಾರರಾದ ಎಚ್.ಎಂ.ವೆಂಕಟೇಶ್,  ಚೇತನ್ ಅಹಿಂಸಾ, ಬಿ.ಆರ್.ಭಾಸ್ಕ‌ರ್ ಪ್ರಸಾದ್, ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.