ಬೆಂಗಳೂರು: ಹವಾಮಾನ ಬದಲಾವಣೆಯಿಂದಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಪರ್ಯಾಯ ಸುಸ್ಥಿರ ಅಭಿವೃದ್ಧಿ ಕ್ರಮಗಳ ಕುರಿತು ಸ್ಥಳೀಯ ಆಡಳಿತ, ಜನರಲ್ಲಿ ಜಾಗೃತಿ ಮೂಡಿಸಲು ಯುವಜನರು ರೂಪಿಸಿದ ಯೋಜನೆಗಳ ಕುರಿತು ಚರ್ಚೆ, ಸಂವಾದ...
ಇದು, ಮರ್ಸಿ ಮಿಷನ್ ಫೆಲೋಶಿಪ್, ಕಮ್ಯೂಟಿನಿ–ಯೂಥ್ ಕಲೆಕ್ಟಿವ್ ಹಾಗೂ ವಾರ್ತಲೀಪ್ ಸಹಯೋಗದಲ್ಲಿ ‘ಬಿಯಾಂಡ್ ರೈಟ್ ಆ್ಯಂಡ್ ರಾಂಗ್– ಯೂಥ್ ಲೀಡರ್‌ಶಿಪ್ ಇಸ್ ಚೇಂಜಿಂಗ್ ದಿ ಗೇಮ್’ ಎಂಬ ಶೀರ್ಷಿಕೆಯಡಿ ಶನಿವಾರ ಆಯೋಜಿಸಿದ್ದ ‘ವ್ಯವಸ್ಥಾಪನ ಉದ್ಯಮಿಗಳಿಗಾಗಿ ಹವಾಮಾನ ಬದಲಾವಣೆ ತಡೆ ಸ್ಪರ್ಧೆ’ಯಲ್ಲಿ ಕಂಡು ಬಂದ ದೃಶ್ಯಗಳು.
ಯುವ ನಾಯಕತ್ವಕ್ಕೆ ಅಗತ್ಯ ಪ್ರೋತ್ಸಾಹ ನೀಡುವುದು ಈ ಕಾರ್ಯಕ್ರಮದ ಉದ್ದೇಶ. ಒಂದೇ ಸೂರಿನಡಿ ಯುವ ಸಮೂಹ, ಶಿಕ್ಷಣ ತಜ್ಞರು, ನೀತಿ ನಿರೂಪಕರು, ದಾನಿಗಳು ಪಾಲ್ಗೊಂಡಿದ್ದರು. ಇಲ್ಲಿ ನಡೆದ ಕ್ವಾಟರ್ ಫೈನಲ್ ಸ್ಪರ್ಧೆಯಲ್ಲಿ ಜಾರ್ಖಂಡ್, ಮಧ್ಯಪ್ರದೇಶ, ಪುದುಚೇರಿ ಹಾಗೂ ಕರ್ನಾಟಕ ರಾಜ್ಯದ ತಂಡಗಳು ಭಾಗವಹಿಸಿದ್ದವು.
ಹವಾಮಾನ ಬದಲಾವಣೆಯಿಂದ ಅಕಾಲಿಕ ಮಳೆ, ತಾಪಮಾನ ಹೆಚ್ಚಳ, ಚಂಡಮಾರುತ, ಕಾಳ್ಗಿಚ್ಚು, ಬರಗಾಲ, ಪ್ರವಾಹ, ಸೇರಿದಂತೆ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿವೆ. ಈ ಸಮಸ್ಯೆಗೆ ತಳಮಟ್ಟದಲ್ಲಿ ಹೇಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂಬುದರ ಕುರಿತು ಈ ನಾಲ್ಕೂ ತಂಡಗಳು ತಮ್ಮ ಹೊಸ ಆಲೋಚನೆಗಳನ್ನು ತೀರ್ಪುಗಾರರ ಮುಂದೆ ಪ್ರಸ್ತುತಪಡಿಸಿದರು.
ಜಾರ್ಖಂಡ್ ರಾಜ್ಯದ ‘ಸಹಯೋಗಿಣಿ’ ತಂಡದ ರೇಖಾ ದೇವಿ ಹಾಗೂ ಇಂದ್ರನಾಥ್ ನಾಯಕ್ ಅವರು ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. ಈ ತಂಡ ಸ್ಥಳೀಯ ಎರಡು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ಜೈವಿಕ ಕೃಷಿ, ಕೈತೋಟ ನಿರ್ಮಾಣ, ನೀರಿನ ಮಿತಬಳಕೆ, ಗ್ರಾಮೀಣ ವಲಸೆ ತಡೆಗಟ್ಟುವ ಕುರಿತು ಪ್ರಾಯೋಗಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಹವಾಮಾನ ಬದಲಾವಣೆ ತಡೆಗೆ ಪರ್ಯಾಯ ಮಾರ್ಗಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಮಧ್ಯಪ್ರದೇಶದ ಇಶಾ ಗುಪ್ತಾ ಮತ್ತು ರಾಜ್‌ಕುಮಾರ್ ಅವರು ದ್ವಿತೀಯ ಸ್ಥಾನ ಪಡೆದುಕೊಂಡರು. ಈ ತಂಡವು, ಕವಿಗಳು–ಲೇಖಕರೊಂದಿಗೆ ಸೇರಿ ಕಾಮಿಕ್, ಕಲೆ–ನೃತ್ಯವನ್ನು ಮಾಧ್ಯಮವಾಗಿ ಬಳಸಿಕೊಂಡು ಹವಾಮಾನ ಬದಲಾವಣೆ ಕುರಿತು ಅರಿವು ಮೂಡಿಸುತ್ತಿದೆ. ಪುದುಚೇರಿ ಹಾಗೂ ಕರ್ನಾಟಕದ ತಂಡಗಳು ಮೂರು ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿವೆ.
ಮರ್ಸಿ ಮಿಷನ್ ಫೆಲೋಶಿಪ್‌ನ ಮಿಸ್ಬಾ ಶಾಹಿದ್, ಸೆಲ್ಕೊ ಫೌಂಡೇಶನ್ ನಿರ್ದೇಶಕಿ ಹುದಾ ಜಾಫರ್ ಉಪಸ್ಥಿತರಿದ್ದರು.
ವಿಜೇತ ತಂಡಕ್ಕೆ ₹5 ಲಕ್ಷ ಬಹುಮಾನ
‘ಡಿಸೆಂಬರ್ 20ರಂದು ನವದೆಹಲಿಯಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ಪ್ರಥಮ ಬಹುಮಾನ ₹5 ಲಕ್ಷ ದ್ವಿತೀಯ ₹4 ಲಕ್ಷ ತೃತೀಯ ಸ್ಥಾನ ಪಡೆದ ತಂಡಕ್ಕೆ ₹3 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಅಂತಿಮ ಸುತ್ತಿನ ಉಳಿದ ಆರು ತಂಡಗಳಿಗೆ ತಲಾ ₹2 ಲಕ್ಷ ವಿತರಿಸಲಾಗುತ್ತದೆ’ ಎಂದು ಕಮ್ಯೂಟಿನಿ–ಯೂಥ್–ಕಲೇಕ್ಟಿವ್‌ನ ವಿಶಾಲ್ ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.