ADVERTISEMENT

ಪೊಲೀಸ್‌ ಠಾಣೆಯಾದ ಡಯಾಲಿಸಿಸ್‌ ಕಟ್ಟಡ !

​ಪ್ರಜಾವಾಣಿ ವಾರ್ತೆ
Published 26 ಮೇ 2021, 22:22 IST
Last Updated 26 ಮೇ 2021, 22:22 IST
ಡಯಾಲಿಸಿಸ್ ಕೇಂದ್ರವಿದ್ದ ಕಟ್ಟಡದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಕಾರ್ಯಾರಂಭ ಮಾಡಿದೆ
ಡಯಾಲಿಸಿಸ್ ಕೇಂದ್ರವಿದ್ದ ಕಟ್ಟಡದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಕಾರ್ಯಾರಂಭ ಮಾಡಿದೆ   

ಬೆಂಗಳೂರು: ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲದ ಕಟ್ಟಡಗಳನ್ನೂ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ. ಆದರೆ, ಬಡವರಿಗೆ ಅಗ್ಗದ ದರದಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಡಯಾಲಿಸಿಸ್‌ ಕಟ್ಟಡವನ್ನು ಪೊಲೀಸ್‌ ಠಾಣೆಯಾಗಿ ಪರಿವರ್ತಿಸಲಾಗಿದೆ!

ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ ಸಮೀಪದ ರಾಮಕೃಷ್ಣ ಹೆಗಡೆ ಉದ್ಯಾನ ಬಳಿ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು. ಆದರೆ, ಹಲವು ತಿಂಗಳುಗಳ ನಂತರವೂ ಡಯಾಲಿಸಿಸ್ ಪರೀಕ್ಷೆ ಮತ್ತು ಚಿಕಿತ್ಸೆ ನೀಡಲು ಬೇಕಾದ ಉಪಕರಣಗಳನ್ನು ಅಳವಡಿಸದೇ ಇದ್ದುದರಿಂದ ಕಟ್ಟಡ ಖಾಲಿ ಬಿದ್ದಿತ್ತು.

ಈ ಬಗ್ಗೆ ‘ಪ್ರಜಾವಾಣಿ‘ಯಲ್ಲಿ ಮೇ 13ರಂದು ವರದಿ ಪ್ರಕಟವಾಗಿತ್ತು. ವರದಿ ಪ್ರಕಟವಾದ ನಾಲ್ಕೈದು ದಿನಗಳಲ್ಲಿಯೇ ಕಟ್ಟಡಕ್ಕೆ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಎಂದು ನಾಮಫಲಕ ಬರೆಯಿಸಿ ಹಾಕಲಾಗಿದೆ. ರಿಂಗ್‍ರಸ್ತೆ ಬದಿಯಲ್ಲಿದ್ದ ಠಾಣೆಯನ್ನು ಈ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ADVERTISEMENT

‘ಕೋವಿಡ್ ಪರೀಕ್ಷೆಗೆ ದೂರದ ಮಲ್ಲತ್ತಹಳ್ಳಿ ಬಳಿಯ ಕೆಂಗುಂಟೆ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿದೆ. ಬಿಬಿಎಂಪಿ ಆಟದ ಮೈದಾನದಲ್ಲಿ ಮುಂಜಾನೆಯಿಂದ ಸಂಜೆಯವರೆಗೆ ಬಿಸಿಲು, ಮಳೆಯಲ್ಲಿ ನಿಲ್ಲಬೇಕಾಗಿದೆ. ಸಿ.ಟಿ.ಸ್ಕ್ಯಾನ್‍ಗಾಗಿ ವಿಕ್ಟೋರಿಯಾ, ಕೆ.ಸಿ.ಜನರಲ್ ಮತ್ತು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಲು ಆರ್ಥಿಕವಾಗಿ ನಮಗೆ ಕಷ್ಟವಾಗುತ್ತದೆ. ಈ ಡಯಾಲಿಸಿಸ್‌ ಕೇಂದ್ರದಲ್ಲಿಯೇ ಸಿ.ಟಿ.ಸ್ಕ್ಯಾನ್‌ಗೆ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ‘ ಎಂದು ಸ್ಥಳೀಯರು ಹೇಳುತ್ತಾರೆ.

‘ಈ ಸಮಯದಲ್ಲಿ ಜನರ ಆರೋಗ್ಯ ರಕ್ಷಣೆಗೆ ಹೆಚ್ಚು ಗಮನ ಹರಿಸಬೇಕಾದ ಸರ್ಕಾರ ಮತ್ತು ಬಿಬಿಎಂಪಿ ಅಧಿಕಾರಿಗಳು, ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರ ಮಾಡುವ ಬದಲು ಪೊಲೀಸ್‌ ಠಾಣೆ ಮಾಡುತ್ತಿದ್ದಾರೆ‘ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.