ADVERTISEMENT

ದಿನವಿಡೀ ಅಲೆದರೂ ಹಾಸಿಗೆ ಸಿಗಲಿಲ್ಲ: ಬೆಂಗಳೂರಿನಲ್ಲಿ ಚಿಕಿತ್ಸೆಗೆ ಸೋಂಕಿತರ ಪರದಾಟ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 20:26 IST
Last Updated 20 ಏಪ್ರಿಲ್ 2021, 20:26 IST
   

ಬೆಂಗಳೂರು: ಅವರ ಹೆಸರು ಕರುಣಾಮೂರ್ತಿ (54). ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಶಾಮಣ್ಣ ಗಾರ್ಡನ್‌ ನಿವಾಸಿ. ನಗರದಲ್ಲಿ ಕೋವಿಡ್‌ ಹರಡುವಿಕೆಯಿಂದ ಉಂಟಾಗಿರುವ ಪರಿಸ್ಥಿತಿ ಅವರ ಮೇಲೆ ಕರುಣೆ ತೋರಿಲ್ಲ. ಕೋವಿಡ್‌ ಸೋಂಕಿನಿಂದ ಬಳಲುತ್ತಿರುವ ಅವರು ಆಂಬುಲೆನ್ಸ್‌ನಲ್ಲಿ ದಿನವಿಡೀ ಅಲೆದರೂ ತುರ್ತು ನಿಗಾ ವ್ಯವಸ್ಥೆಯ ಹಾಸಿಗೆ ಲಭಿಸಲಿಲ್ಲ.

ಕರುಣಾಮೂರ್ತಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿತ್ತು. ಅವರಿಗೆ ಬಿಬಿಎಂಪಿ ಪೂರ್ವ ವಲಯದ ಅಧಿಕಾರಿಗಳು ಬಿ.ಯು.ನಂಬರ್‌ ಒದಗಿಸಿ ಕಿಮ್ಸ್‌ ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸಿದ್ದರು. ಅಲ್ಲಿಗೆ ಹೋಗುವಷ್ಟರಲ್ಲಿ ಕರುಣಾಮೂರ್ತಿ ಅವರ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಶೇ 70ಕ್ಕಿಂತ ಕಡಿಮೆ ಆಗಿತ್ತು. ಅಮ್ಲಜನಕ ಪೂರಣ ವ್ಯವಸ್ಥೆಯ ಹಾಸಿಗೆ ಲಭ್ಯ ಇಲ್ಲದ ಕಾರಣ ಕಿಮ್ಸ್‌ನವರು ಅವರನ್ನು ಬೇರೆ ಕಡೆ ಕರೆದೊಯ್ಯುವಂತೆ ಸೂಚಿಸಿದರು. ಅವರನ್ನು ಬೇರೆ ಆಸ್ಪತ್ರೆಗೆ ದಾಖಲಿಸಲು ಕುಟುಂಬಸ್ಥರು ಮುಂದಾದರು.

‘ನಾವು ಮೂರು ಗಂಟೆಗಳಿಂದ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದೇವೆ. ಎಲ್ಲೂ ಹಾಸಿಗೆ ಸಿಗುತ್ತಿಲ್ಲ. ಏನು ಮಾಡಬೇಕೆಂದೇ ತೋಚುತ್ತಿಲ್ಲ’ ಎಂದು ಕರುಣಾಮೂರ್ತಿ ಅವರ ಸಹೋದರ ರಾಮಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಗರದಲ್ಲಿ ಅನೇಕ ರೋಗಿಗಳು ಐಸಿಯು ಹಾಸಿಗೆ ಸಿಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಪರಿಸ್ಥಿತಿ ಬಿಗಡಾಯಿಸಲು ಆರಂಭವಾಗಿ 15 ದಿನಗಳೇ ಕಳೆದಿವೆ. ಜನರ ಜೀವವನ್ನು ಕಾಪಾಡುವುದಕ್ಕೆ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ. ಬಿಬಿಎಂಪಿಯ ಸಹಾಯವಾಣಿಗೆ ಕರೆ ಮಾಡಿದರೆ ಸ್ಪಂದನೆ ಸಿಗುತ್ತಿಲ್ಲ. ಅಧಿಕಾರಿಗಳೂ ಕರೆ ಸ್ವೀಕರಿಸುತ್ತಿಲ್ಲ. ಭವಿಷ್ಯದ ದಿನಗಳು ಇನ್ನಷ್ಟು ಕರಾಳ ಆಗಿರಲಿವೆ. ಈ ಬಗ್ಗೆ ಯೋಚಿಸಿದರೇ ಮೈ ನಡುಗುತ್ತದೆ’ ಎಂದು ಮಾಜಿ ಕಾರ್ಪೊರೇಟರ್‌ ಒಬ್ಬರು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.