ಬೆಂಗಳೂರು: ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಡಿಜಿಟಲ್ ಆ್ಯಪ್ ಬಳಸಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಬೇಕು. ಆ್ಯಪ್ ಸಿದ್ಧವಾಗುವವರೆಗೂ ಸಮೀಕ್ಷೆ ಮುಂದೂಡಬೇಕು ́ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಒತ್ತಾಯಿಸಿದೆ.
‘ಇ– ಆಡಳಿತ ಇಲಾಖೆಯ ಸಹಯೋಗದೊಂದಿಗೆ ಡಿಜಿಟಲ್ ಆ್ಯಪ್ ರೂಪಿಸಿ ಸಮೀಕ್ಷೆ ನಡೆಸಲು ಸಚಿವ ಸಂಪುಟವು ತೀರ್ಮಾನಿಸಿ ಈಗಾಗಲೇ ಆದೇಶ ಹೊರಡಿಸಿದೆ. ಆದರೆ, ಆಯೋಗವು ಇ–ಆಡಳಿತ ಇಲಾಖೆಗೆ ಪತ್ರ ಬರೆಯುವುದಾಗಲಿ, ಆ್ಯಪ್ ಸಿದ್ಧಪಡಿಸುವ ಕುರಿತು ತೀರ್ಮಾನವನ್ನಾಗಲಿ ಕೈಗೊಂಡಂತೆ ಕಾಣುತ್ತಿಲ್ಲ ́ಎಂದು ಮಹಾಸಭಾವು ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.
‘ನಾಗಮೋಹನದಾಸ್ ಆಯೋಗವು ಚುನಾವಣಾ ಆಯೋಗದಲ್ಲಿ ಲಭ್ಯ ಇರುವ ಮತದಾರರ ಪಟ್ಟಿಯನ್ನು ಬಳಸಿಕೊಂಡು ಪರಿಶಿಷ್ಟ ಜಾತಿ, ಪಂಗಡದ ಸಮೀಕ್ಷೆ ಕೈಗೊಂಡಿದೆ. ಇದೇ ಮಾದರಿಯಲ್ಲಿ ಹಿಂದುಳಿದ ವರ್ಗಗಳ ಆಯೋಗ ಕೂಡ ಗಣತಿ ನಡೆಸಲಿ ಎಂದು ಸಂಪುಟ ಸಭೆ ನಿರ್ಧರಿಸಿದ್ದರೂ ಇಂತಹ ತಯಾರಿ ನಡೆಸಿದಂತೆ ಕಾಣುತ್ತಿಲ್ಲ. ಬರೀ ಮನೆಗಳ ವಿದ್ಯುತ್ ಮೀಟರ್ ಬಳಸಿ ಸಮೀಕ್ಷೆ ನಡೆಸುತ್ತಿರುವುದು ಸಮರ್ಪಕವಾಗುವುದಿಲ್ಲ ́ ಎಂದು ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.