ಬೆಂಗಳೂರು: ಲಾಲ್‌ಬಾಗ್‌ನಲ್ಲಿ ನೂರಾರು ವರ್ಷಗಳಿಂದ ಬೆಳೆದು ನಿಂತಿರುವ ದೇಶ–ವಿದೇಶಗಳ ಸಾವಿರಾರು ಸಸ್ಯ ಪ್ರಭೇದಗಳ ಡಿಜಿಟಲೀಕರಣ ಕಾರ್ಯ ಪ್ರಾರಂಭವಾಗಿದೆ. ಆರಂಭಿಕ ಹಂತದಲ್ಲಿ 50ಕ್ಕೂ ಹೆಚ್ಚು ಪ್ರಭೇದಗಳಿಗೆ ಕ್ಯೂಆರ್ ಕೋಡ್ ನೀಡಿದ್ದು, ಮೊಬೈಲ್‌ನಿಂದ ಸ್ಕ್ಯಾನ್ ಮಾಡಿದರೆ ಈ ಗಿಡಗಳ ಸಂಪೂರ್ಣ ಮಾಹಿತಿ ಸಿಗಲಿದೆ.
ಸಸ್ಯದ ಮೂಲ ಹೆಸರು, ಉಗಮ ಸ್ಥಾನ, ದೇಶ, ಬೆಳವಣಿಗೆ, ಬೆಳೆಯುವ ಹವಾಗುಣ, ಹೂ–ಹಣ್ಣು ಮತ್ತು ಎಲೆಗಳು ಬಿಡುವ ಕಾಲ, ಅದರ ವೈಜ್ಞಾನಿಕ ಹೆಸರು ಸಹಿತ ಎಲ್ಲ ಮಾಹಿತಿ ಒಳಗೊಂಡಿರುತ್ತದೆ. ಇದು ಸಸ್ಯಗಳನ್ನು ಗುರುತಿಸಲು ಅನುಕೂಲವಾಗಲಿದೆ.
ಜೀವವೈವಿಧ್ಯಶಾಸ್ತ್ರಜ್ಞ ಕೇಶವಮೂರ್ತಿ ಅವರ ನೇತೃತ್ವದಲ್ಲಿ ವಿಜ್ಞಾನಿಗಳ ತಂಡ ಮರಗಳ ಮಾಹಿತಿ ದಾಖಲಿಸುವ ಕಾರ್ಯ ಮಾಡುತ್ತಿದೆ. ಸದ್ಯ 50 ಸಸ್ಯ ಪ್ರಭೇದಗಳ ಮಾಹಿತಿ ನೀಡುವ ಕ್ಯೂಆರ್ ಕೋಡ್ ನೀಡಲಾಗಿದೆ. ಹಂತ–ಹಂತವಾಗಿ ಲಾಲ್‌ಬಾಗ್‌ನ ಎಲ್ಲ ಮರಗಳ ಮಾಹಿತಿ ಸಂಗ್ರಹಿಸಿ, ಕ್ಯೂಆರ್ ಕೋಡ್ ಅಳವಡಿಸುವ ಕೆಲಸ ನಡೆಯಲಿದೆ. ಇದು ಪೂರ್ಣಗೊಂಡ ಬಳಿಕ ಲಾಲ್‌ಬಾಗ್‌ನ ಸಸ್ಯ ಸಂಪತ್ತಿನ ಸಂಪೂರ್ಣ ಮಾಹಿತಿ ‘ಪ್ಲಾಂಟ್ ವೆಲ್ತ್ ಆಫ್ ಲಾಲ್‌ಬಾಗ್’ ಎಂಬ ಪುಸ್ತಕ ರೂಪದಲ್ಲಿ ಪ್ರಕಟವಾಗಲಿದೆ.
‘ಸಸ್ಯವಿಜ್ಞಾನ ವಿದ್ಯಾರ್ಥಿಗಳಿಗೆ, ಗಿಡ–ಮರಗಳ ಬಗ್ಗೆ ಕುತೂಹಲ ಇರುವವರಿಗೆ, ಜೀವ ವೈವಿಧ್ಯ ಅಧ್ಯಯನಕಾರರಿಗೆ ಇದರಿಂದ ಅನುಕೂಲವಾಗಲಿದೆ. ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳನ್ನು ಸಂರಕ್ಷಿಸಲು ಈ ದಾಖಲಾತಿ ನೆರವಾಗಲಿದೆ. ಜಗತ್ತಿನ ಪ್ರಮುಖ ಸಸ್ಯೋದ್ಯಾನಗಳ ಜತೆ ಪ್ರಭೇದಗಳ ವಿನಿಮಯ ಯೋಜನೆಗೆ ಇದರಿಂದ ನೆರವಾಗಲಿದೆ’ ಎಂದು ಲಾಲ್‌ಬಾಗ್‌ನ ಉಪ ನಿರ್ದೇಶಕ ಎಚ್.ಟಿ. ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರತಿಯೊಂದು ಸಸ್ಯವೂ ಆಯಾ ಋತುಮಾನಕ್ಕೆ ತಕ್ಕಂತೆ ಬದಲಾಗುತ್ತಲೇ ಇರುತ್ತದೆ. ಎಲೆ ಚಿಗುರುವ, ಉದುರುವ, ಹೂವು ಬಿಡುವ, ಕಾಯಿ ಕಟ್ಟುವ ಅವಧಿಗಳು ಬೇರೆ ಬೇರೆ. ಹೀಗಾಗಿ ಅವೆಲ್ಲವನ್ನೂ ಅಧ್ಯಯನ ಮಾಡಬೇಕು ಮತ್ತು ಛಾಯಾಗ್ರಹಣ ಮಾಡಬೇಕು. ಇದಕ್ಕೆ ದೀರ್ಘ ಸಮಯ ಬೇಕಾಗುತ್ತದೆ’ ಎಂದರು.
ಟ್ರೈಸಿಕಲ್, ಬೈಸಿಕಲ್ ಪರಿಚಯ: ‘ಫೆಚ್ ಮೊಬಿಲಿಟಿ ಸಂಸ್ಥೆಯ ವತಿಯಿಂದ ಲಾಲ್‌ಬಾಗ್‌ನಲ್ಲಿ ಓಡಾಡಲು ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ಟ್ರೈಸಿಕಲ್ ಮತ್ತು ಬೈಸಿಕಲ್‌ಗಳನ್ನು ಪರಿಚಯಿಸಲಾಗುತ್ತದೆ. ಮೂರು ತಿಂಗಳವರೆಗೆ ಪ್ರಾಯೋಗಿಕವಾಗಿ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ಇದು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಕಬ್ಬನ್ ಉದ್ಯಾನದಲ್ಲೂ ಪರಿಚಯಿಸಲಾಗುತ್ತದೆ’ ಎಂದರು.
‘ಪ್ಲಾಂಟ್ ವೆಲ್ತ್ ಆಫ್ ಲಾಲ್‌ಬಾಗ್ ಪುಸ್ತಕದಲ್ಲಿ ಲಾಲ್‌ಬಾಗ್‌ನ ಸಸ್ಯ ಸಂಪತ್ತಿನ ವಿವರ ದೊರಕುತ್ತದೆ. ಜತೆಗೆ ಹೊಸದಾಗಿ ತರಿಸಲಾದ ಗಿಡಗಳು, ತೋಟದ ಬೆಳವಣಿಗೆ ಕುರಿತ ದಾಖಲೆಯೂ ಆಗಲಿದೆ. 1980ರ ಅವಧಿಯಲ್ಲೊಮ್ಮೆ ಈ ದಾಖಲೆ ಮಾಡಲಾಗಿತ್ತು. ಆ ಬಳಿಕ ದೊಡ್ಡ ಸಂಖ್ಯೆಯ ಸಸ್ಯಗಳನ್ನು ತರಿಸಿ ಬೆಳೆಸಿದ್ದೇವೆ. ಅವುಗಳ ದಾಖಲೆ ಇರಲಿಲ್ಲ. ಈಗ ಆ ಕೆಲಸ ಮಾಡುತ್ತಿದ್ದೇವೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಮಾಹಿತಿ ನೀಡಿದರು.
ಲಾಲ್‌ಬಾಗ್ ಕೆರೆಯಲ್ಲಿ ತೇಲುವ ಉದ್ಯಾನ: ಲಾಲ್‌ಬಾಗ್ ಆವರಣದ ಕೆರೆಯಲ್ಲಿ ಪರಿಸರ ಸ್ನೇಹಿ ತೇಲುವ ಉದ್ಯಾನ ನಿರ್ಮಿಸಲಾಗಿದೆ. ಇದರಲ್ಲಿ 9 ಸಾವಿರಕ್ಕೂ ಹೆಚ್ಚು ಸಸಿಗಳಿವೆ. ದಟ್ಸ್ ಇಕೊ ಫೌಂಡೇಷನ್‌ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್) ₹75 ಲಕ್ಷ ವೆಚ್ಚದಲ್ಲಿ ಈ ಉದ್ಯಾನ ನಿರ್ಮಿಸಲಾಗಿದೆ.
ಬೊನ್ಸಾಯ್ ಉದ್ಯಾನದ ಅಭಿವೃದ್ಧಿ
ಲಾಲ್‌ಬಾಗ್‌ನ ಬೊನ್ಸಾಯ್ ಉದ್ಯಾನ ಹೊಸ ಆಕರ್ಷಣೆಯೊಂದಿಗೆ ಸಾರ್ವಜನಿಕರನ್ನು ಸ್ವಾಗತಿಸಲು ಸಜ್ಜಾಗಿದೆ. ಪ್ರಾಕೃತಿಕವಾಗಿ ಬೃಹತ್ ಗಾತ್ರದಲ್ಲಿ ಬೆಳೆಯುವ ಮರಗಳನ್ನು ಇಲ್ಲಿ ಕುಬ್ಜಗೊಳಿಸಿ ಅವುಗಳನ್ನು ಕುಂಡಗಳಲ್ಲಿ ಬೆಳೆದು ಅದಕ್ಕೊಂದು ರೂಪ ನೀಡಲಾಗಿದೆ. ಲಾಲ್‌ಬಾಗ್‌ನ 2.5 ಎಕರೆ ಪ್ರದೇಶದಲ್ಲಿರುವ ಬೊನ್ಸಾಯ್ ಉದ್ಯಾನಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದೆ. ಇಲ್ಲಿ 10 ವರ್ಷದಿಂದ 80 ವರ್ಷದವರೆಗಿನ 100ಕ್ಕೂ ಹೆಚ್ಚು ಬೋನ್ಸಾಯ್ ಗಿಡಗಳನ್ನು ವಿವಿಧ ಹಂತಗಳಲ್ಲಿ ವಿನ್ಯಾಸಗೊಳಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಬೊನ್ಸಾಯ್ ಕಲಾವಿದೆ ಅನುಪಮಾ ವೇದಾಚಲ ಅವರ ಮಾರ್ಗದರ್ಶನದಲ್ಲಿ ಈ ಉದ್ಯಾನದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ‘₹55 ಲಕ್ಷ ವೆಚ್ಚದಲ್ಲಿ ಈ ಉದ್ಯಾನದ ಮರು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ದೇಶದ ಪ್ರಥಮ ಬೊನ್ಸಾಯ್ ಉದ್ಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ’ ಎಂದು ಜಗದೀಶ್ ಹೇಳಿದರು.
ಹರ್ಬೇರಿಯಂ ಎಂದರೇನು?
‘ಸಸ್ಯ ಪ್ರಭೇದಗಳ ವಿವಿಧ ಭಾಗಗಳನ್ನು ಒಣಗಿಸಿ ವ್ಯವಸ್ಥಿತವಾಗಿ ಸಂಗ್ರಹಿಸಿಡುವ ಮಾದರಿಗೆ ಹರ್ಬೇರಿಯಂ ಎಂದು ಕರೆಯಲಾಗುತ್ತದೆ. ಸಸ್ಯಗಳ ಹೂವು ಹಣ್ಣು ಕಾಯಿ ಎಲೆಗಳನ್ನು ಸಂಗ್ರಹಿಸಿ ಅವುಗಳನ್ನು ಒಂದು ಹಾಳೆಯಲ್ಲಿ ಹೊಲಿಗೆ ಹಾಕಿ ಒಣಗಿಸಲಾಗುತ್ತದೆ. ಅದರಲ್ಲಿ ಸಸ್ಯದ ಕುರಿತ ಸಂಕ್ಷಿಪ್ತ ಮಾಹಿತಿ ಸೇರಿಸಲಾಗಿರುತ್ತದೆ. ಸಸ್ಯಗಳನ್ನು ಗುರುತಿಸಲು ಈ ಪ್ರಕ್ರಿಯೆ ಸಹಾಯಕವಾಗುತ್ತದೆ. ಒಂದು ಹರ್ಬೇರಿಯಂ ಶೀಟ್ ತಯಾರಿಸಲು 15ರಿಂದ 20 ದಿನಗಳು ಬೇಕಾಗುತ್ತದೆ’ ಎಂದು ಕೇಶವಮೂರ್ತಿ ತಿಳಿಸಿದರು. ಲಾಲ್‌ಬಾಗ್ ಉದ್ಯಾನದಲ್ಲಿರುವ ಸಸ್ಯ ಪ್ರಭೇದಗಳ ಸಂರಕ್ಷಿತ ಸಸ್ಯ ಮಾದರಿ ಸಂಗ್ರಹ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಲು ಸಹಕಾರಿಯಾಗುವಂತೆ ಸಸ್ಯ ಪ್ರಭೇದಗಳ ಪರ್ಣ ಸಂಗ್ರಹ(ಹರ್ಬೇರಿಯಂ)’ ಕೈಗೊಳ್ಳಲಾಗಿದೆ. ಉದ್ಯಾನದಲ್ಲಿನ ಎಲ್ಲ ಸಸ್ಯಗಳನ್ನು ಹೀಗೆ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ 1580 ಹರ್ಬೇರಿಯಂಗಳನ್ನು ಸಂಗ್ರಹಿಸಲಾಗಿದೆ’ ಎಂದು ಬಾಲಕೃಷ್ಣ ತಿಳಿಸಿದರು.
ಅಧಿಕಾರಿಗಳು ಏನಂತಾರೆ?
ಮುಂದಿನ ಒಂದು ವರ್ಷದಲ್ಲಿ ಲಾಲ್‌ಬಾಗ್‌ನ ಎಲ್ಲ ಮರಗಳಿಗೆ ಕ್ಯೂಆರ್ ಕೋಡ್ ಅಳವಡಿಸಲಾಗುವುದು. ಇದರ ಜೊತೆಗೆ ಲಾಲ್‌ಬಾಗ್ ಕೆರೆಯಲ್ಲಿ ತೇಲುವ ಉದ್ಯಾನ ಬೊನ್ಸಾಯ್ ಉದ್ಯಾನ ಸಾರ್ವಜನಿಕರ ಆಕರ್ಷಣೆಯ ಕೇಂದ್ರಗಳಾಗಿವೆ. ಯುವಕರು ಹಾಗೂ ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ಎಲೆಕ್ಟ್ರಿಕ್ ಟ್ರೈಸಿಕಲ್ ಮತ್ತು ಬೈಸಿಕಲ್‌ಗಳನ್ನು ಪರಿಚಯಿಸಲಾಗಿದೆ. ಡಿ.ಎಸ್. ರಮೇಶ್ ತೋಟಗಾರಿಕೆ ಇಲಾಖೆ ನಿರ್ದೇಶಕ –0– ಲಾಲ್‌ಬಾಗ್‌ನ ಎಲ್ಲ ಗಿಡ–ಮರಗಳಿಗೆ ಕ್ಯೂಆರ್ ಕೋಡ್ ಅಳವಡಿಸುವ ಯೋಜನೆಗೆ ಸುಮಾರು ₹ 17 ಲಕ್ಷದಿಂದ 18 ಲಕ್ಷ ವೆಚ್ಚವಾಗಲಿದೆ. ಅಪರೂಪದ ಅಳಿವಿನಂಚಿನಲ್ಲಿರುವ ಸಸ್ಯಗಳನ್ನು ನೆಟ್ಟು ಸಂರಕ್ಷಿಸುವ ಯೋಜನೆಯೂ ಜಾರಿಯಲ್ಲಿದೆ. ಜಗದೀಶ್ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ
ಅಂಕಿ–ಅಂಶಗಳು
240 ಎಕರೆಲಾಲ್‌ಬಾಗ್ ಉದ್ಯಾನದ ವಿಸ್ತೀರ್ಣ 2350ಲಾಲ್‌ಬಾಗ್‌ನಲ್ಲಿರುವ ವಿವಿಧ ದೇಶ–ವಿದೇಶಗಳ ಸಸ್ಯಪ್ರಭೇದಗಳು 6 ಸಾವಿರಕ್ಕೂ ಹೆಚ್ಚುಲಾಲ್‌ಬಾಗ್‌ನಲ್ಲಿರುವ ಒಟ್ಟು ಮರಗಳ ಸಂಖ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.