ADVERTISEMENT

ಕೆಂಪೇಗೌಡ ಮ್ಯೂಸಿಯಂಗೆ ಡಿಜಿಟಲ್‌ ರೂಪ

ಐದು ತಿಂಗಳಲ್ಲಿ ಯೋಜನೆ ಪೂರ್ಣ: ಬಿಬಿಎಂಪಿ ಮೇಯರ್‌ ಆರ್‌. ಸಂಪತ್‌ರಾಜ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2018, 20:02 IST
Last Updated 26 ಜೂನ್ 2018, 20:02 IST
ವಸ್ತು ಸಂಗ್ರಹಾಲಯವನ್ನು ಮೇಯರ್‌ ಆರ್‌.ಸಂಪತ್‌ರಾಜ್, ಉಪಮೇಯರ್‌ ಪದ್ಮಾವತಿ, ಆಡಳಿತ ಪಕ್ಷದ ನಾಯಕ ಶಿವರಾಜ್‌, ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ವೀಕ್ಷಿಸಿದರು.
ವಸ್ತು ಸಂಗ್ರಹಾಲಯವನ್ನು ಮೇಯರ್‌ ಆರ್‌.ಸಂಪತ್‌ರಾಜ್, ಉಪಮೇಯರ್‌ ಪದ್ಮಾವತಿ, ಆಡಳಿತ ಪಕ್ಷದ ನಾಯಕ ಶಿವರಾಜ್‌, ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ವೀಕ್ಷಿಸಿದರು.   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ವಸ್ತು ಸಂಗ್ರಹಾಲಯದ ಅಭಿವೃದ್ಧಿ ಕುರಿತಂತೆ ಕೆಂಪೇಗೌಡ ವಸ್ತು ಸಂಗ್ರಹಾಲಯ ಅಭಿವೃದ್ಧಿ ಸಮಿತಿ ಸದಸ್ಯರೊಂದಿಗೆ ಮೇಯರ್‌ ಆರ್.ಸಂಪತ್‌ರಾಜ್ ಮಂಗಳವಾರ ಸಭೆ ನಡೆಸಿದರು.

‘ಕೆಂಪೇಗೌಡರ ಇತಿಹಾಸ ಮತ್ತು ಸಾಧನೆಗಳ ಕುರಿತು ತಿಳಿಸಲು ಹಾಗೂ ಸಂಗ್ರಹಾಲಯವನ್ನು ಡಿಜಿಟಲ್‌ ರೂಪದಲ್ಲಿ ತರಲು ₹7.50 ಕೋಟಿ ವೆಚ್ಚದಲ್ಲಿ ವಿಸ್ತೃತ ಯೋಜನಾ ವರದಿ ತಯಾರಿಸಿ ಟೆಂಡರ್‌ ಕರೆಯಲಾಗಿದೆ. ಐದು ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಲಾಗುತ್ತದೆ’ ಎಂದು ಅವರು ಹೇಳಿದರು. ಸಂಗ್ರಹಾಲಯದ ಅಭಿವೃದ್ಧಿ ಕುರಿತಂತೆ ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಬೇಕು ಎಂದು ಅವರು ಸೂಚಿಸಿದರು.

ಸಂಗ್ರಹಾಲಯದ ಮೊದಲ ಮಹಡಿಯಲ್ಲಿ ಕೆಂಪೇಗೌಡರ ಸಾಧನೆ ತಿಳಿಸಲು ಡಿಜಿಟಲ್‌ ಲೈಟಿಂಗ್‌ ಮೂಲಕ 20 ನಿಮಿಷಗಳ ವಿಡಿಯೊ ಚಿತ್ರ, 3 ಡಿ ಮಾದರಿಯಲ್ಲಿ ಬಯಲು ರಂಗಮಂದಿರ ಹಾಗೂ ಪರಂಪರೆಯ ಗೋಡೆ ನಿರ್ಮಾಣ ಮಾಡಬೇಕು ಎಂದರು.

ADVERTISEMENT

ಮ್ಯೂಸಿಯಂ ಅಭಿವೃದ್ಧಿ ಸಮಿತಿಯ ಸದಸ್ಯ ಚಿರಂಜೀವಿ ಸಿಂಗ್‌ ಮಾತನಾಡಿ, ‘ಪುರಾತತ್ವ ಇಲಾಖೆಯಿಂದ ಮ್ಯೂಸಿಯಂಗೆ ಐವರು ಹಿರಿಯ ಅಧಿಕಾರಿಗಳನ್ನು ನಿಯೋಜಿಸಬೇಕು. ಡಿಜಿಟಲ್‌ ರೂಪ ಪಡೆದ ಬಳಿಕ ಇಲ್ಲಿ ಕೆಫೆಟೆರಿಯಾ ಆರಂಭಿಸಬೇಕು. ನಾಡಪ್ರಭುವಿನ ಕಾಲದ ಆಹಾರ ಪದ್ಧತಿಯನ್ನು ಇಲ್ಲಿ ಪರಿಚಯಿಸಬೇಕು’ ಎಂದು ಸಲಹೆ ನೀಡಿದರು.

ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಮಾಗಡಿ, ನೆಲಮಂಗಲ, ದೊಡ್ಡಬಳ್ಳಾಪುರ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಕೆಂಪೇಗೌಡರಿಗೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸಬೇಕು. ಮ್ಯೂಸಿಯಂಗೆ ಬರುವ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲು ಮಾರ್ಗದರ್ಶಕರನ್ನು ನೇಮಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.