ADVERTISEMENT

ವಜ್ರ ಕಳವು: ಠಾಣೆ ಎದುರೇ ಧಮ್ಕಿ

ಸಚಿವ ಜಮೀರ್‌ ಹೆಸರಲ್ಲಿ ಜೀವ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2019, 19:09 IST
Last Updated 4 ಮೇ 2019, 19:09 IST

ಬೆಂಗಳೂರು: ₹ 7.50 ಲಕ್ಷ ಮೊತ್ತದ ವಜ್ರ ಕಳವು ಪ್ರಕರಣದ ಆರೋಪಿ ಮೊಹಮ್ಮದ್ ಎಂಬಾತನನ್ನು ವಿಧಾನಸೌಧ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆ ಸುದ್ದಿ ತಿಳಿಯುತ್ತಿದ್ದಂತೆ ಠಾಣೆ ಎದುರು ಸೇರಿದ್ದ ಆರೋಪಿ ಕಡೆಯವರು ದೂರುದಾರ ಕರಣ್‌ ವರ್ಮಾ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ.

ವಜ್ರ ಖರೀದಿಸುವ ನೆಪದಲ್ಲಿ ಸೂರತ್‌ ವ್ಯಾಪಾರಿ ಕರಣ್‌ ಅವರನ್ನು ನಗರಕ್ಕೆ ಕರೆಸಿಕೊಂಡಿದ್ದ ಆರೋಪಿ, ವಜ್ರಗಳಿದ್ದ ಪೊಟ್ಟಣ ಕದ್ದಿದ್ದ. ಆ ಸಂಬಂಧ ಕರಣ್ ನೀಡಿದ್ದ ದೂರಿನಡಿ ಮೊಹಮ್ಮದ್‌ನನ್ನು ಬಂಧಿಸಲಾಗಿದೆ.

ಆರೋಪಿ ಮೊಹಮ್ಮದ್, ಹರಳು ವ್ಯಾಪಾರಿ. ಕರಣ್‌ ಅವರನ್ನು ಸಂಪರ್ಕಿಸಿ ವಜ್ರಕ್ಕೆ ಬೇಡಿಕೆ ಸಲ್ಲಿಸಿದ್ದರು. ವಜ್ರಗಳನ್ನು ಕೊಡಲು ಕರಣ್‌, ಪಾಲುದಾರ ರಾಜು ಒಟ್ಟಿಗೆ ಏಪ್ರಿಲ್ 25ರಂದು ಬೆಂಗಳೂರಿಗೆ ಬಂದಿದ್ದರು.

ADVERTISEMENT

‘ಅರಮನೆ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ವ್ಯಾಪಾರಿಯನ್ನು ಭೇಟಿಯಾಗಿದ್ದ ಮೊಹಮ್ಮದ್, ಅಸಲಿ ವಜ್ರಗಳಿದ್ದ ಪೊಟ್ಟಣವನ್ನು ಕದ್ದಿದ್ದರು. ಅದೇ ಜಾಗದಲ್ಲಿ ನಕಲಿ ವಜ್ರಗಳಿದ್ದ ಪೊಟ್ಟಣ ಇಟ್ಟಿದ್ದರು. ಸ್ನೇಹಿತರೊಬ್ಬರನ್ನು ಭೇಟಿಯಾಗಿ ಬರುವುದಾಗಿ ಹೇಳಿ ಹೋಟೆಲ್‌ನಿಂದ ಹೊರಟು ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

ದೂರು ಹಿಂಪಡೆಯುವಂತೆ ಒತ್ತಡ: ‘ಆರೋಪಿಯನ್ನು ಬಂಧಿಸಿದ್ದ ಸುದ್ದಿ ತಿಳಿಯುತ್ತಿದ್ದಂತೆ 50ಕ್ಕೂ ಹೆಚ್ಚು ಮಂದಿ ಠಾಣೆಗೆ ಬಂದಿದ್ದರು. ಠಾಣೆ ಎದುರು ನಿಂತಿದ್ದ ದೂರುದಾರ ಕರಣ್ ವರ್ಮಾ ಜೊತೆ ಜಗಳ ತೆಗೆದು, ದೂರು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ನಾನು, ಆಹಾರ ಸಚಿವ ಜಮೀರ್ ಅಹ್ಮದ್‌ ಆಪ್ತ ಸಹಾಯಕ. ಕೊಟ್ಟಿರುವ ದೂರು ವಾಪಸ್ ತಗೆದುಕೊ. ಇಲ್ಲದಿದ್ದರೆ ಈ ರಾತ್ರಿ ಮನೆಗೆ ವಾಪಸ್‌ ಹೋಗುವುದಿಲ್ಲ’ ಎಂದು ವ್ಯಕ್ತಿಯೊಬ್ಬ ದೂರುದಾರರಿಗೆ ಧಮ್ಕಿ ಹಾಕಿದ್ದಾನೆ’ ಎಂದು ಮೂಲಗಳು ಹೇಳಿವೆ.

ಠಾಣೆ ಎದುರಿನ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಹಿರಿಯ ಅಧಿಕಾರಿ, ‘ಠಾಣೆ ಎದುರು ಜೀವ ಬೆದರಿಕೆ ಹಾಕಿರುವ ಬಗ್ಗೆ ಪ್ರತ್ಯೇಕ ದೂರು ನೀಡಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಮ್ಮ ಹೆಸರು ಬಳಸಿಕೊಂಡು ಜೀವ ಬೆದರಿಕೆ ಹಾಕಿರುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಚಿವ ಜಮೀರ್ ಅಹ್ಮದ್ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.