ADVERTISEMENT

‘ತಜ್ಞ ವೈದ್ಯರ ಕೊರತೆ ನೀಗಿಸಲು ಡಿಪ್ಲೊಮಾ ಕೋರ್ಸ್ ಸಹಕಾರಿ’

ಎಎನ್‌ಬಿಎಐ ಆಯೋಜಿಸಿದ್ದ ವೆಬಿನಾರ್‌ನಲ್ಲಿ ತಜ್ಞರು ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 21:00 IST
Last Updated 20 ಆಗಸ್ಟ್ 2020, 21:00 IST

ಬೆಂಗಳೂರು: ‘ಕೇಂದ್ರ ಆರೋಗ್ಯ ಸಚಿವಾಲಯವು ರಾಷ್ಟ್ರೀಯ ಪರೀಕ್ಷಾ ಮಂಡಳಿಯಡಿ ಎಂಟು ವೈದ್ಯಕೀಯ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳಿಗೆ ಅನುಮೋದನೆ ನೀಡಿದ್ದರಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯ ಸಮಸ್ಯೆ ನಿವಾರಣೆಯಾಗಲಿದೆ’ ಎಂದು ವೈದ್ಯಕೀಯ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಸೋಸಿಯೇಷನ್‌ ಆಫ್ ನ್ಯಾಷನಲ್‌ ಬೋರ್ಡ್‌ ಅಕ್ರಿಡಿಟೆಡ್‌ ಇನ್‌ಸ್ಟಿಟ್ಯೂಷನ್ಸ್‌ (ಎಎನ್‌ಬಿಎಐ) ಗುರುವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ವೈದ್ಯಕೀಯ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ನ ಮಹತ್ವದ ಬಗ್ಗೆ ವೈದ್ಯರು ಹಾಗೂ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

‘ಪ್ರತಿ ವರ್ಷ ಸಾವಿರಾರು ಪದವೀಧರರು ವೈದ್ಯಕೀಯ ಸೀಟಿನಿಂದ ವಂಚಿತರಾಗುತ್ತಿದ್ದರು. ಇದರಿಂದಾಗಿ ವೈದ್ಯರಾಗಬೇಕೆಂಬ ಅವರ ಕನಸು ಕಮರಿಹೋಗುತ್ತಿತ್ತು. ಆದರೆ, ಈಗ ಎರಡು ವರ್ಷಗಳ ಡಿಪ್ಲೊಮಾ ಕೋರ್ಸ್‌ಗಳಿಗೆ ಕೂಡ ಮಾನ್ಯತೆ ನೀಡಿದ್ದರಿಂದ ವಿವಿಧ ವಿಭಾಗಗಳಲ್ಲಿ ಪದವಿ ಪಡೆದುಕೊಳ್ಳಬಹುದು. ಹೀಗಾಗಿ ವೈದ್ಯರ ಕೊರತೆ ಮುಂದಿನ ದಿನಗಳಲ್ಲಿ ದೂರವಾಗಲಿದೆ. ಗ್ರಾಮೀಣ ಭಾಗದ ವೈದ್ಯಕೀಯ ವ್ಯವಸ್ಥೆ ಕೂಡ ಸುಧಾರಿಸಲಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಈಗ ಹೆಚ್ಚಿನ ಆಯ್ಕೆಗಳಿದ್ದು, ಪಾರದರ್ಶಕವಾಗಿ ಪ್ರವೇಶ ಪ್ರಕ್ರಿಯೆ ನಡೆಸಲಾಗುವುದು’ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಅಧ್ಯಕ್ಷ ಡಾ. ಅಭಿಜಿತ್ ಸೇಠ್ ತಿಳಿಸಿದರು.

ADVERTISEMENT

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ‘ಹಲವು ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಲ್ಲ. ಇದರಿಂದಾಗಿ ಅಲ್ಲಿನ ರೋಗಿಗಳು ಚಿಕಿತ್ಸೆಗೆ ಮಹಾನಗರಗಳಿಗೆ ಬರಬೇಕಾದ ಸ್ಥಿತಿಯಿದೆ. ಈ ಕೋರ್ಸ್‌ಗಳನ್ನು ಪರಿಚಯಿಸಿರುವುದರಿಂದ ಮೂರನೇ ಹಂತದ ನಗರಗಳಲ್ಲಿ ಕೂಡ ವೈದ್ಯಕೀಯ ಸೌಲಭ್ಯದ ಗುಣಮಟ್ಟ ಹೆಚ್ಚಲಿದೆ.ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಡಿಎನ್‌ಬಿ ತರಬೇತಿ ನೀಡುವುದರಿಂದ ತಜ್ಞ ವೈದ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿ ಮಾಡಲು ಸಾಧ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.