ADVERTISEMENT

ಡಿಪ್ಲೊಮಾ ಪರೀಕ್ಷೆ ನಡೆಸದಂತೆ ಪ್ರಾಂಶುಪಾಲರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 20:23 IST
Last Updated 22 ಜುಲೈ 2021, 20:23 IST
ವಿಶ್ವಭಾರತಿ ಪದವಿ ಪೂರ್ವ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.
ವಿಶ್ವಭಾರತಿ ಪದವಿ ಪೂರ್ವ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.   

ಬೆಂಗಳೂರು: ತಾಂತ್ರಿಕ ಶಿಕ್ಷಣ ನಿರ್ದೇಶನಾಲಯವು (ಡಿಟಿಎ) ಇದೇ 28ರಿಂದ ನಿಗದಿಪಡಿಸಿರುವ ಡಿಪ್ಲೊಮಾ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ರದ್ದು ಮಾಡಬೇಕು ಎಂದು ಒತ್ತಾಯಿಸಿ ಡಿಪ್ಲೊಮಾ ಕಾಲೇಜುಗಳ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳು ಗುರುವಾರ ಮನವಿ ಸಲ್ಲಿಸಿದರು.

ಪರೀಕ್ಷೆ ರದ್ದು ಮಾಡುವಂತೆ ಡಿಪ್ಲೊಮಾ ವಿದ್ಯಾರ್ಥಿಗಳು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಅದರ ಭಾಗವಾಗಿ ನಗರದ ಶ್ರೀಜಯಚಾಮರಾಜೇಂದ್ರ ಪಾಲಿಟೆಕ್ನಿಕ್ (ಎಸ್‌ಜೆಪಿ), ಆಚಾರ್ಯ ಪಾಠಶಾಲಾ ಪಾಲಿಟೆಕ್ನಿಕ್, ಪಿವಿಪಿ ಡಿಪ್ಲೊಮಾ ಕಾಲೇಜು, ಕೆ.ಎಸ್.ಪಾಲಿಟೆಕ್ನಿಕ್, ಜಾಲಪ್ಪ ಪಾಲಿಟೆಕ್ನಿಕ್, ಶಾಂತಿನಿಕೇತನ ಪಾಲಿಟೆಕ್ನಿಕ್, ಆಕ್ಸ್ ಫರ್ಡ್ ಪಾಲಿಟೆಕ್ನಿಕ್ ಸೇರಿದಂತೆ ವಿವಿಧ ಡಿಪ್ಲೊಮಾ ಕಾಲೇಜುಗಳಲ್ಲಿ ಪ್ರಾಂಶುಪಾಲರಿಗೆ ಮನವಿ ಸಲ್ಲಿಸುವ ಮೂಲಕ ಪರೀಕ್ಷೆ ರದ್ದು ಮಾಡಲು ಆಗ್ರಹಿಸಿದರು.

‘ಡಿಟಿಇ ನಿರ್ಧಾರದಿಂದ ಡಿಪ್ಲೊಮಾ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಪ್ರಥಮ ಮತ್ತು ದ್ವಿತೀಯ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳು 18 ವರ್ಷದೊಳಗಿನವರಾಗಿದ್ದು, ಕೋವಿಡ್ ಲಸಿಕೆ ಪಡೆದಿಲ್ಲ. ಈ ಪರಿಸ್ಥಿತಿಯಲ್ಲಿ ಪರೀಕ್ಷೆ ನಿಗದಿ ಮಾಡಿರುವುದು ಆಘಾತಕಾರಿ’ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಒಂದೇ ಸೆಮಿಸ್ಟರ್‌ ಪರೀಕ್ಷೆ ನಡೆಸುವುದಾಗಿ ಸುತ್ತೋಲೆ ಹೊರಡಿಸಿವೆ. ಆದರೆ, ಬೆಂಗಳೂರು ವಿಶ್ವವಿದ್ಯಾಲಯ ಎರಡೂ ಸೆಮಿಸ್ಟರ್ ಪರೀಕ್ಷೆ ನಡೆಸುವ ಮೂಲಕ ತಾರತಮ್ಯ ಮಾಡುತ್ತಿದೆ’ ಎಂದು ದೂರಿದರು.

ಎಐಡಿಎಸ್ಒಬೆಂಗಳೂರು ಜಿಲ್ಲಾ ಕಾರ್ಯದರ್ಶಿಕಲ್ಯಾಣ್ ಕುಮಾರ್, ‘ಒಂದು ತಿಂಗಳ ಅವಧಿಯಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸದೆ, ಒಂದೇ ಸೆಮಿಸ್ಟರ್‌ನ ಪರೀಕ್ಷೆ ನಡೆಸಬೇಕು. ಪಿಯುಸಿ ಪರೀಕ್ಷೆಯಂತೆ ಡಿಪ್ಲೊಮಾ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಬೇಕು. ಆಂತರಿಕ ಮೌಲ್ಯಮಾಪನ ಅಥವಾ ವೈಜ್ಞಾನಿಕ ಮಾನದಂಡದ ಮೌಲ್ಯಮಾಪನ ನಡೆಸಬೇಕು. ಎಲ್ಲ ವಿದ್ಯಾರ್ಥಿಗಳು ಲಸಿಕೆ ಪಡೆದ ನಂತರ ಭೌತಿಕ ತರಗತಿಗಳನ್ನು ಆರಂಭಿಸಬೇಕು. ಈ ಸಂಬಂಧ ಯುಜಿಸಿ ಮಾರ್ಗಸೂಚಿಯನ್ನು ಡಿಟಿಇ ಮತ್ತು ವಿಶ್ವವಿದ್ಯಾಲಯಗಳು ಪಾಲಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.