ಬೆಂಗಳೂರು: ನಗರದ ಸುತ್ತಮುತ್ತಲಿನ ಏಳು ರೈಲು ನಿಲ್ದಾಣಗಳನ್ನು ಸಂಪರ್ಕಿಸುವ ವೃತ್ತ ರೈಲು ಸಂಪರ್ಕ ಜಾಲಕ್ಕೆ ಯೋಜನೆ ರೂಪಿಸಲಾಗಿದೆ. ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ನೇರ ಸಂಪರ್ಕ ದೊರಕಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜನಸಂಖ್ಯೆ ಹೆಚ್ಚಳದಿಂದ ಬೆಂಗಳೂರು ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಒಂದು ರೈಲು ನಿಲ್ದಾಣದಿಂದ ಮತ್ತೊಂದು ರೈಲು ನಿಲ್ದಾಣಕ್ಕೆ ತಲುಪುವುದು ಸವಾಲಿನ ಕೆಲಸವಾಗಿದೆ. ದಟ್ಟಣೆಯ ಒತ್ತಡ ತಪ್ಪಿಸುವುದಕ್ಕೆ ಸುರಂಗ ರಸ್ತೆಗಳಿಗಿಂತ ವೃತ್ತ ರೈಲು ಯೋಜನೆ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಲಿದೆ. ಸಮಯದ ಉಳಿತಾಯವೂ ಆಗಲಿದೆ. ಮುಂದಿನ 50 ವರ್ಷಗಳಲ್ಲಿ ಉಂಟಾಗಬಹುದಾದ ವಾಹನದಟ್ಟಣೆ, ಜನದಟ್ಟಣೆ ತಪ್ಪಿಸುವ ಗುರಿ ಇಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ನಿಡವಂದ–ದೊಡ್ಡಬಳ್ಳಾಪುರ–ದೇವನಹಳ್ಳಿ–ಮಾಲೂರು–ಹೀಲಲಿಗೆ–ಸೋಲೂರು–ನಿಡವಂದ ನಿಲ್ದಾಣಗಳನ್ನು ಸಂಪರ್ಕಿಸುವ ವೃತ್ತರೈಲು ಸಂಪರ್ಕ ಜಾಲ 287 ಕಿ.ಮೀ. ಇರಲಿದೆ ಎಂದರು.
ಯಲಹಂಕದಿಂದ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ 7.90 ಕಿ.ಮೀ ರೈಲುಮಾರ್ಗ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ 1.65 ಕಿ.ಮೀ ಸುರಂಗ ಮಾರ್ಗ ನಿರ್ಮಿಸಲಾಗುವುದು. ವಿವಿಧೆಡೆಯಿಂದ ರೈಲು ಮೂಲಕ ಬೆಂಗಳೂರಿಗೆ ಬರುವ ಪ್ರಯಾಣಿಕರು ನೇರವಾಗಿ ವಿಮಾನ ನಿಲ್ದಾಣ ತಲುಪಬಹುದು. ಬೇರೆ ನಗರಗಳಿಗೆ ತೆರಳಲು ಅಲ್ಲಿಂದಲೇ ರೈಲು ಸೇವೆ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿಸೂರ್ಯ, ಡಾ.ಸಿ.ಎನ್. ಮಂಜುನಾಥ್, ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೊಯಾ, ವಿಧಾನಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
61 ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ
ಅಮೃತ್ ಭಾರತ್ ಯೋಜನೆಯಲ್ಲಿ ₹2 ಸಾವಿರ ಕೋಟಿ ವೆಚ್ಚದಲ್ಲಿ ರಾಜ್ಯದ 61 ರೈಲು ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಪ್ರತಿ ನಿಲ್ದಾಣದಲ್ಲೂ ಆಯಾ ವ್ಯಾಪ್ತಿಯ ಸಂಸ್ಕೃತಿ ಪರಂಪರೆಗೆ ಅನುಗುಣವಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಜನ ವಾಹನದಟ್ಟಣೆ ನಿರ್ವಹಿಸಲು ವಿಶಾಲ ರಸ್ತೆಗಳು ಹಸಿರು ಪರಿಸರಕ್ಕೆ ಆದ್ಯತೆ ನೀಡಲಾಗಿದೆ. ಎಲ್ಲ ರೀತಿಯ ಮೂಲಸೌಕರ್ಯಗಳನ್ನೂ ನಿಲ್ದಾಣಗಳು ಒಳಗೊಂಡಿರುತ್ತವೆ ಎಂದು ಅಶ್ವಿನಿ ವೈಷ್ಣವ್ ವಿವರ ನೀಡಿದರು.
ಎಂ.ಡಿ. ನೇಮಕಕ್ಕೆ ಸಲಹೆ
ಉಪನಗರ ರೈಲ್ವೆ ಯೋಜನೆಯ ಟೆಂಡರ್ ತಾಂತ್ರಿಕ ಕಾರಣಗಳಿಂದ ಮೂರು ಬಾರಿ ರದ್ದಾಗಿದೆ. ಉಪನಗರ ರೈಲು ನಿಗಮಕ್ಕೆ ರಾಜ್ಯ ಸರ್ಕಾರ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಬೇಕು. 12ರಿಂದ 13 ತಾಂತ್ರಿಕ ಪರಿಣತ ಎಂಜಿನಿಯರ್‌ಗಳನ್ನು ಒದಗಿಸಬೇಕು. ಪೂರ್ವಾವಧಿ ವ್ಯವಸ್ಥಾಪಕ ನಿರ್ದೇಶಕರು ಇಲ್ಲದಿದ್ದರೆ ಯೋಜನೆ ನಿರೀಕ್ಷಿತ ವೇಗದಲ್ಲಿ ಪೂರ್ಣಗೊಳ್ಳದು ಎಂದು ಅಶ್ವಿನಿ ವೈಷ್ಣವ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.