ADVERTISEMENT

ಹೈಕೋರ್ಟ್‌ ಕಚೇರಿಗೆ ಸ್ಥಳಾವಕಾಶ: ತಕ್ಷಣದ ಕ್ರಮಕ್ಕೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 16:46 IST
Last Updated 2 ಫೆಬ್ರುವರಿ 2022, 16:46 IST

ಬೆಂಗಳೂರು:’ರಾಜ್ಯ ವಕೀಲರ ಪರಿಷತ್‌ ಕಾರ್ಯ ನಿರ್ವಹಿಸುತ್ತಿರುವ (ಹಳೆಯ ಚುನಾವಣಾ ಆಯೋಗದ ಕಟ್ಟಡ) ಹಾಗೂ ಕೆಜಿಐಡಿ ಬಿಲ್ಡಿಂಗ್‌ಗಳನ್ನು ಹೈಕೋರ್ಟ್‌ಗೆ ಒದಗಿಸುವ ನಿಟ್ಟಿನಲ್ಲಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದುರಾಜ್ಯ ಸರ್ಕಾರಕ್ಕೆ, ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ವಕೀಲ ರಮೇಶ್ ಎಲ್. ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ’ಹೈಕೋರ್ಟ್‌ ಕಚೇರಿಗೆ ಅಗತ್ಯ ಸ್ಥಳಾವಕಾಶ ಕಲ್ಪಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಈ ಸಂಬಂಧ ಅಡ್ವೊಕೇಟ್ ಜನರಲ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆ ಮಾತುಕತೆ ನಡೆಸಿದ್ದಾರೆ. ಅಗತ್ಯ ಜಾಗ ಒದಗಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು’ ಎಂದು ಕೋರಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ’ಕೋವಿಡ್ ನಡುವೆಯೂ ನ್ಯಾಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ನೆಲಮಹಡಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ.ಹೈಕೋರ್ಟ್‌ಗೆ ಅವಶ್ಯವಿರುವ ಕಚೇರಿಯ ಜಾಗ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇದೇ 14ರೊಳಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ, ಮುಂದಿನ ವಿಚಾರಣೆ ವೇಳೆಗೆ ನ್ಯಾಯಾಲಯವೇ ಕೆಜಿಐಡಿ ಹಾಗೂ ವಕೀಲರ ಪರಿಷತ್‌ ಕಟ್ಟಡ ಖಾಲಿ ಮಾಡಿಸಲು ಆದೇಶ ಹೊರಡಿಸಲಿದೆ’ ಎಂದು ಎಚ್ಚರಿಸಿತು.

ಕೋರಿಕೆ ಏನು?: ’ಹೈಕೋರ್ಟ್‌ ನೆಲಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಗಳಿಗೆ ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆ ಇಲ್ಲ. ಇದರಿಂದ ಕೆಲಸ ಮಾಡುವ ಸಿಬ್ಬಂದಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ, ಇಲ್ಲಿರುವ ಕಚೇರಿಗಳನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.