ADVERTISEMENT

ದೀಪಾವಳಿ: ಹೆಚ್ಚಿದ ವಾಯು ಮಾಲಿನ್ಯ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 20:14 IST
Last Updated 7 ನವೆಂಬರ್ 2018, 20:14 IST
ಮಲ್ಲೇಶ್ವರದಲ್ಲಿ ಬುಧವಾರ ರಾತ್ರಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವ ಕುಟಂಬ
ಮಲ್ಲೇಶ್ವರದಲ್ಲಿ ಬುಧವಾರ ರಾತ್ರಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವ ಕುಟಂಬ   

ಬೆಂಗಳೂರು: ಮೂರು ದಿನಗಳಿಂದ ನಗರದಲ್ಲಿ ವಾಹನಗಳ ಸಂಚಾರ ಸಾಕಷ್ಟು ಕಡಿಮೆಯಾಗಿದೆ. ಅಲ್ಲದೇ ಪಟಾಕಿ ಹೊಡೆಯಲು ನಿರ್ಬಂಧ ಹೇರಲಾಗಿದ್ದರೂ ವಾಯು ಮಾಲಿನ್ಯದ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.

ರೈಲ್ವೆ ನಿಲ್ದಾಣದ ಭಾಗದಲ್ಲಿ ಬುಧವಾರ ಸಂಜೆ ಹೊತ್ತಿಗೆ ಮಾಲಿನ್ಯದ ಪ್ರಮಾಣ 134 ಮೈಕ್ರೊ ಗ್ರಾಂನಷ್ಟು ದಾಖಲಾಗಿದೆ. ಹೆಬ್ಬಾಳ (77), ಜಯನಗರ (98), ಕವಿಕಾ (88), ನಿಮ್ಹಾನ್ಸ್‌ (53), ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ (60) ಬಸವೇಶ್ವರನಗರ (67) ಕೇಂದ್ರಗಳಲ್ಲೂ ಮಾಲಿನ್ಯ ಹೆಚ್ಚಿದೆ.

ನ. 4 ಮತ್ತು 5 ರಂದು (ಭಾನುವಾರ, ಸೋಮವಾರ) ಹೆಬ್ಬಾಳದಲ್ಲಿ 57 (ಎಂ.ಜಿ.), ಜಯನಗರದಲ್ಲಿ 57, ಕವಿಕಾ 55, ನಿಮ್ಹಾನ್ಸ್‌ 49, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ 44, ರೈಲ್ವೆ ನಿಲ್ದಾಣದಲ್ಲಿ 117, ಬಸವೇಶ್ವರನಗರದಲ್ಲಿ 35 ರಷ್ಟು ದಾಖಲಾಗಿತ್ತು.

ADVERTISEMENT

ಹೆಚ್ಚಿದ ಪಿ.ಎಂ 2.5: ರಾತ್ರಿ ಒಂಬ ಗಂಟೆ ಹೊತ್ತಿಗೆ ನಗರದಲ್ಲಿ ಮಾಲಿನ್ಯ ಹೆಚ್ಚಿದೆ. ಜಯನಗರ (357), ಕವಿಕಾ (312), ಸಿಲ್ಕ್‌ಬೋರ್ಡ್‌ (312),ಹೆಬ್ಬಾಳ (302) ಕೇಂದ್ರಗಳಲ್ಲಿ ಮಂಗಳವಾರ ರಾತ್ರಿ 9ರ ವೇಳೆಗೆ ಪಿ.ಎಂ 2.5 (ಗಾಳಿಯಲ್ಲಿ ತೇಲಾಡುವ ದೂಳಿನ ಕಣ) ಸಾಕಷ್ಟು ಹೆಚ್ಚಿದೆ.

‘ಪಟಾಕಿ ಹೊಡೆಯದಂತೆ ನಗರದಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗಿತ್ತು. ಬಹುತೇಕ ಜನರು ಊರಿಗೆ ಹೋಗಿರುವ ಕಾರಣ ವಾಹನಗಳ ಓಡಾಟ ಕೂಡ ಕಡಿಮೆಯಾಗಿತ್ತು. ಆದ್ದರಿಂದ ಹೋದವರ್ಷಕ್ಕೆ ಹೋಲಿಸಿದರೆ, ಈ ವರ್ಷದ ದೀಪಾವಳಿ ಸಂದರ್ಭದಲ್ಲಿ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ’ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್‌ ಹೇಳಿದರು.

ಹೆಚ್ಚಿದ ಶಬ್ದಮಾಲಿನ್ಯ: ಮಂಗಳವಾರ ಹಾಗೂ ಬುಧವಾರ ರಾತ್ರಿ 9 ಗಂಟೆ ನಂತರ ಶಬ್ದ ಮಾಲಿನ್ಯ ಹೆಚ್ಚಿತ್ತು. 8ರಿಂದ 10 ಗಂಟೆವರೆಗೆ ಪಟಾಕಿ ಹೊಡೆಯಬೇಕು ಎಂಬ ಆದೇಶವನ್ನು ಬಹುತೇಕರು ಪಾಲಿಸಿದ್ದಾರೆ.

ಈ ಕಾರಣ ರಾತ್ರಿ 9 ಗಂಟೆ ಹೊತ್ತಿಗೆ ಮಡಿವಾಳದಲ್ಲಿ 67.3 ಡಿಸಿಬಲ್‌ನಷ್ಟು ಶಬ್ದದ ತೀವ್ರತೆ ಕಂಡುಬಂತು. ನಿಮ್ಹಾನ್ಸ್‌ (68.1), ವೈಟ್‌ಫೀಲ್ಡ್‌ (65.8), ನಿಸರ್ಗ ಭವನ (40.0), ಚರ್ಚ್‌ ಸ್ಟ್ರೀಟ್‌ (67.7), ಪೀಣ್ಯದಲ್ಲಿ (60) ಶಬ್ದ ಮಾಲಿನ್ಯ ಇತ್ತು.

ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಹೊಡೆಯಬೇಕು ಎಂಬ ನಿರ್ಬಂಧವಿದ್ದರೂ ಬೇರೆ ಅವಧಿಯಲ್ಲೂ ಪಟಾಕಿ ಹೊಡೆದಿರುವುದು ಕಂಡುಬಂದಿದೆ. ಆದರೆ, ಒಟ್ಟಾರೆ ಪಟಾಕಿ ಹೊಡೆಯುವ ಪ್ರಮಾಣದಲ್ಲಿ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.