ADVERTISEMENT

ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ: ನಷ್ಟ ಪರಿಹಾರ ಕೋರಿದವರು ಮೂರೇ ಮಂದಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 8:08 IST
Last Updated 19 ಫೆಬ್ರುವರಿ 2021, 8:08 IST
 ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ   

ಬೆಂಗಳೂರು: ನಗರದ ಡಿ.ಜೆ. ಹಳ್ಳಿ ಮತ್ತು ಕೆ.ಜಿ.‌ ಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 2020ರ ಆಗಸ್ಟ್ 11ರಂದು ನಡೆದ ಗಲಭೆಯಲ್ಲಿ ಹಾನಿಗೀಡಾದ ಆಸ್ತಿಗಳ ಮಾಲೀಕರ ಪೈಕಿ ಮೂರು ಮಂದಿ ಮಾತ್ರ ನಷ್ಟ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಘಟನೆಯ ಕ್ಲೇಮ್ ಕಮಿಷನರ್ ಆಗಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು' 'ಹೈಕೋರ್ಟ್ ಆದೇಶದಂತೆ ಕ್ಲೇಮ್ ಕಮಿಷನರ್ ನೇಮಕ ಮಾಡಲಾಗಿದೆ. ಫೆಬ್ರುವರಿ 28ರವೆರಗೂ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಈವರೆಗೆ ಮೂರು ಅರ್ಜಿಗಳು ಮಾತ್ರ ಬಂದಿವೆ' ಎಂದರು.

ಮಾಹಿತಿ ಕೊರತೆ ಅಥವಾ ಬೇರೆ ಕಾರಣಗಳಿಂದ ಜನರು ಅರ್ಜಿ ಸಲ್ಲಿಸದೇ ಇರಬಹುದು. ಘಟನೆಯಲ್ಲಿ ಆಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಲ್ಲಿ 50 ಪ್ರಕರಣಗಳು ದಾಖಲಾಗಿವೆ. ಅಂತಹ ಎಲ್ಲರೂ ನಷ್ಟ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.

ADVERTISEMENT

ಅರ್ಜಿ ಸಲ್ಲಿಕೆಗೆ ನೀಡಿರುವ ಕಾಲಾವಕಾಶವನ್ನು ವಿಸ್ತರಿಸಲಾಗುವುದು. ಪೊಲೀಸ್ ಠಾಣೆಗಳಲ್ಲೂ ಸಭೆ ನಡೆಸಿ ಜನರಿಗೆ ಮಾಹಿತಿ ನೀಡಲಾಗುವುದು. ಪೊಲೀಸ್ ಠಾಣೆಗಳಲ್ಲಿ ಲಭ್ಯವಿರುವ ದಾಖಲೆಗಳನ್ನೂ ವಿಚಾರಣೆ ವೇಳೆ ಆಧಾರವಾಗಿ ಬಳಸಿಕೊಳ್ಳಲಾಗುವುದು ಎಂದರು.

ಅರ್ಜಿಯೊಂದಿಗೆ ನಷ್ಟಕ್ಕೀಡಾಗಿರುವ ಆಸ್ತಿಗೆ ಸಂಬಂಧಿಸಿದ ದಾಖಲೆ, ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಪ್ರತಿ, ವಿಡಿಯೊ ತುಣುಕು ಸೇರಿದಂತೆ ಹಲವು ದಾಖಲೆಗಳನ್ನು ಸಲ್ಲಿಸಬೇಕು. ಆ ಬಳಿಕ ನಷ್ಟಕ್ಕೀಡಾದ ಆಸ್ತಿಗಳ‌ ಮೌಲ್ಯಮಾಪನ ನಡೆಸಿ ಹೈಕೋರ್ಟ್ ಗೆ ವರದಿ ಸಲ್ಲಿಸಲಾಗುವುದು. ಅದನ್ನು ಆಧರಿಸಿ ಗಲಭೆಗೆ ಕಾರಣವಾದ ವ್ಯಕ್ತಿ ಅಥವಾ ಸಂಘಟನೆಗಳಿಂದ ನಷ್ಟ ವಸೂಲಿಗೆ ನ್ಯಾಯಾಲಯ ಆದೇಶ ಹೊರಡಿಸಲಿದೆ ಎಂದು ಕೆಂಪಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.