ADVERTISEMENT

ಬೆಂಗಳೂರು ಗಲಭೆ: ಶಿವಾಜಿನಗರದ ಸೈಯದ್ ಅಜ್ನಾನ್, ಮುಜಾಮಿಲ್ ಪಾಷ ಪ್ರಮುಖ ಆರೋಪಿ

ನಿನ್ನೆ ರಾತ್ರಿ ಏನೆಲ್ಲಾ ಆಯ್ತು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 10:19 IST
Last Updated 12 ಆಗಸ್ಟ್ 2020, 10:19 IST
ಮುಜಾಮಿಲ್ ಪಾಷ
ಮುಜಾಮಿಲ್ ಪಾಷ   

ಬೆಂಗಳೂರು:ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆಗೆ ಶಿವಾಜಿನಗರದ ಸೈಯದ್ ಅಜ್ನಾನ್ ಹಾಗೂ ಮುಜಾಮಿಲ್ ಪಾಷ ಪ್ರಮುಖ ಕಾರಣ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಇಬ್ಬರನ್ನೂ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅಜ್ಞಾತ ಸ್ಥಳದಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಶಿವಾಜಿನಗರದಲ್ಲಿ ಧಾರ್ಮಿಕ ಶಾಲೆ ನಡೆಸುತ್ತಿರುವ ಸೈಯದ್ ಅಜ್ನಾನ್, ಎಸ್‌ಡಿಪಿಐ ಪಕ್ಷದ ಮುಖಂಡ ಮುಜಾಮಿಲ್ ಪಾಷ ಸೇರಿದಂತೆ 15 ಮಂದಿ ಮಂಗಳವಾರ ರಾತ್ರಿ 8.30ರ ಸುಮಾರಿಗೆ ಡಿ.ಜೆ.ಹಳ್ಳಿ ಠಾಣೆಗೆ ಬಂದಿದ್ದರು.

'ಇಸ್ಲಾಂ ಧರ್ಮ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿರುವ ನವೀನ್‌ನನ್ನು ಬಂಧಿಸಬೇಕು' ಎಂದು ದೂರು ನೀಡಿದ್ದರು. ದೂರು ಪಡೆದಿದ್ದ ಇನ್‌ಸ್ಪೆಕ್ಟರ್ ಕೇಶವಮೂರ್ತಿ, ಎಫ್ಐಆರ್ ದಾಖಲಿಸಿಕೊಂಡು ಕೂಡಲೇ ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದ್ದರು.

ಅದಕ್ಕೆ ಒಪ್ಪದ ಮುಖಂಡರು, 'ಈಗಲೇ ಬಂಧಿಸಿ ಠಾಣೆಗೆ ಕರೆತನ್ನಿ' ಎಂದು ಪಟ್ಟು ಹಿಡಿದರು. ಅವಾಗಲೇ ಪರಿಸ್ಥಿತಿ ವಿಕೋಪಕ್ಕೆ ಹೊಯಿತು. ಅಷ್ಟರಲ್ಲೇ ಠಾಣೆ ಎದುರು ಸಾವಿರಾರು ಮಂದಿ ಸೇರಿದ್ದರು. ಠಾಣೆಯಿಂದ ಹೊರಬಂದ ಅಜ್ನಾನ್ ಹಾಗೂ ಮುಜಾಮಿಲ್, ಜನರ ಜೊತೆ ಸೇರಿ ಪ್ರತಿಭಟನೆ ಆರಂಭಿಸಿದರು.

ಮುಂಜಾಗ್ರತಾ ಕ್ರಮವಾಗಿ ಠಾಣೆ ಗೇಟ್ ಅನ್ನು ಪೊಲೀಸರು ಮುಚ್ಚಿದ್ದರು. ಅಷ್ಟರಲ್ಲಿ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಹಾಗೂ ಬಾಣಸವಾಡಿ ಉಪವಿಭಾಗದ ಎಸಿಪಿ ರವೀಂದ್ರಪ್ರಸಾದ್ ಠಾಣೆಗೆ ಬಂದಿದ್ದರು.

ಗೇಟ್ ಮುರಿದು ಠಾಣೆಯೊಳಗೆ ನುಗ್ಗಲು ಕಿಡಿಗೇಡಿಗಳು ಯತ್ನಿಸಿದರು. ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್ ವಾಹನಕ್ಕೆ ಬೆಂಕಿ ಹಚ್ಚಿದರು. ಠಾಣೆ ನೆಲಮಹಡಿಯ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಸುಟ್ಟರು. ಘಟನಾ ಸ್ಥಳಕ್ಕೆ ಬಂದ ಕೆಎಸ್‌ಆರ್‌ಪಿ ವಾಹನ, ಹೊಯ್ಸಳ ಗಸ್ತು ವಾಹನಕ್ಕೂ ಸೀಮೆಎಣ್ಣೆ ಹಾಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು.

ಕೆಲವರು, ಠಾಣೆಯೊಳಗೆ ನುಗ್ಗಲಿ ಯತ್ನಿಸಿ ಪೊಲೀಸರ ಬಂದೂಕುಗಳನ್ನು ಕಿತ್ತುಕೊಳ್ಳಲು ಮುಂದಾದರು. ಇದೇ ವೇಳೆಯೇ ಡಿಸಿಪಿ, ಎಸಿಪಿ ಅವರು ಠಾಣೆ ಬಾಗಿಲನ್ನು ಒಳಗಿನಿಂದ ಮುಚ್ಚಿ ರಕ್ಷಣೆ ಪಡೆದುಕೊಂಡರು. ಅದೇ ಸಂದರ್ಭದಲ್ಲಿ ಉದ್ರಿಕ್ತರು, ಠಾಣೆ ಕಿಟಕಿ ಬಾಗಿಲಿನ ಗಾಜು ಒಡೆದರು.

ಈ ಗಲಭೆ ನಡೆಯುತ್ತಿದ್ದ ವೇಳೆ ಅಜ್ನಾನ್ ಹಾಗೂ ಮುಜಾಮಿಲ್ ಸ್ಥಳದಲ್ಲೇ ಇದ್ದರು. ಅವರೇ ಇತರರಿಗೆ ಪ್ರಚೋದನೆ ನೀಡಿದ್ಧರು ಎಂಬುದಕ್ಕೆ ವಿಡಿಯೊಗಳು ಲಭ್ಯವಾಗಿವೆ‌. ಚುನಾವಣೆಗೆ ಸ್ಪರ್ಧಿಸಿದ್ದ ಮುಜಾಮಿಲ್: ಬಂಧಿತ ಆರೋಪಿ ಮುಜಾಮಿಲ್, ಕಳೆದ ಬಿಬಿಎಂಪಿ ಚುನಾವಣೆಯಲ್ಲಿಎಸ್‌ಡಿಪಿ ಪಕ್ಷದ ಅಭ್ಯರ್ಥಿಯಾಗಿ ಸಗಾಯ್‌ಪುರ ವಾರ್ಡ್-60 ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.