ADVERTISEMENT

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಪ್ರಕರಣ: ಮಾಜಿ ಕಾರ್ಪೋರೇಟರ್ ಬಂಧನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 2:59 IST
Last Updated 3 ಡಿಸೆಂಬರ್ 2020, 2:59 IST
ಜಾಕೀರ್
ಜಾಕೀರ್   

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದ ಪ್ರಕರಣದ ಆರೋಪಿಯಾಗಿರುವ ಮಾಜಿ ಕಾರ್ಪೋರೇಟರ್ ಜಾಕೀರ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೃತ್ಯದ ನಂತರ ಒಂದು ಬಾರಿ ವಿಚಾರಣೆಗೆ ಹಾಜರಾಗಿದ್ದ ಜಾಕೀರ್, ನಂತರ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಕಾಂಗ್ರೆಸ್ ಮುಖಂಡರೂ ಆಗಿರುವ ಮಾಜಿ ಮೇಯರ್‌ ಆರ್.ಸಂಪತ್‌ ರಾಜ್‌ ಹಾಗೂ ಜಾಕೀರ್ ವಿರುದ್ಧ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪಟ್ಟಿ ಸಲ್ಲಿಕೆ ನಂತರವೂ ತಲೆಮರೆಸಿಕೊಂಡಿದ್ದ ಸಂಪತ್‌ರಾಜ್ ಅವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಇದೀಗ ಮಾಜಿ ಕಾರ್ಪೋರೇಟರ್ ಜಾಕೀರ್‌ ಅವರನ್ನು ಸಿಸಿಬಿ ಸೆರೆ ಹಿಡಿದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.

ADVERTISEMENT

‘ರಾಜಕೀಯ ವೈಷಮ್ಯದಿಂದಾಗಿ ಅಖಂಡ್ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ದಾಳಿ ಮಾಡಿಸಲಾಗಿತ್ತು. ಇದರಲ್ಲಿ ಸಂಪತ್‌ರಾಜ್, ಜಾಕೀರ್ ಹಾಗೂ ಹಲವರ ಪಾತ್ರವಿದೆ. ಮತ್ತಷ್ಟು ಮಂದಿಯನ್ನು ಬಂಧಿಸಬೇಕಿದೆ’ ಎಂದು ಸಿಸಿಬಿ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ) ಠಾಣೆ ವ್ಯಾಪ್ತಿಯಲ್ಲಿರುವ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಆ. 11ರಂದು ರಾತ್ರಿ ನುಗ್ಗಿದ್ದ ದುಷ್ಕರ್ಮಿಗಳು, ಬೆಂಕಿ ಹಚ್ಚಿದ್ದರು. ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಸಿಸಿಬಿ ವಿಶೇಷ ತಂಡ ಪ್ರಕರಣದ ತನಿಖೆ ಕೈಗೊಂಡಿತ್ತು.

ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಗಳ ಮೇಲಿನ ದಾಳಿ ಮತ್ತು ಬೆಂಕಿ ಹಚ್ಚಿದ್ದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.