ADVERTISEMENT

‘ಯೋಗಿ’ ಸರ್ಕಾರವಲ್ಲ; ರೋಗಿ ಸರ್ಕಾರ: ಡಿಕೆಶಿ

ಕಾಂಗ್ರೆಸ್‌ನಿಂದ ಪಂಜಿನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 20:16 IST
Last Updated 1 ಅಕ್ಟೋಬರ್ 2020, 20:16 IST
ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಯಿತು
ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಯಿತು   

ಬೆಂಗಳೂರು: ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಸಂತ್ರಸ್ತೆಯ ಪೋಷಕರಿಗೆ ಸಾಂತ್ವನ ಹೇಳಲು ತೆರಳುತ್ತಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮೇಲೆ ಹಲ್ಲೆ ನಡೆಸಿ, ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿ ವತಿಯಿಂದ ಗುರುವಾರ ಪಂಜಿನ ಪ್ರತಿಭಟನೆ ನಡೆಯಿತು.

ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಿಂದ ಆನಂದ್ ರಾವ್ ವೃತ್ತದ ಬಳಿಯ ಗಾಂಧಿ ಪ್ರತಿಮೆವರೆಗೂ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕಿ ಸೌಮ್ಯಾರೆಡ್ಡಿ ಮತ್ತಿತರರು ಭಾಗವಹಿಸಿದರು. ಪ್ರತಿಭಟನಕಾರರನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಬಿಡುಗಡೆ ಮಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಬೇಟಿ ಬಚಾವ್, ಬೇಟಿ ಪಡಾವೊ ಎಂಬ ಘೋಷಣೆ ಕೊಟ್ಟರು. ಆದರೆ, ಉತ್ತರ ಪ್ರದೇಶದಲ್ಲಿ ಯೋಗಿ ಅವರ ಸರ್ಕಾರ ರೋಗಿ ಸರ್ಕಾರ ಆಗಿದೆ. ಈ ಅತ್ಯಾಚಾರ
ಕೇವಲ ದೇಶದ ಪ್ರತಿ ಹೆಣ್ಣಿನ ಸ್ವಾಭಿಮಾನದ ವಿಚಾರ ಅಲ್ಲ. ಇಡೀ ಮನುಕುಲಕ್ಕೆ ಆಗಿರುವ ಅಪಮಾನ. ಆಕೆಯ ಶವವನ್ನು ಪೋಷಕರಿಗೆ ತೋರಿಸದೆ, ಬಿಜೆಪಿ ಸರ್ಕಾರ ಅತ್ಯಂತ ಕ್ರೂರತೆ ಪ್ರದರ್ಶಿಸಿದೆ’ ಎಂದು ಶಿವಕುಮಾರ್ ದೂರಿದರು.

ADVERTISEMENT

‘ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಮೇಲೆ ಉತ್ತರ ಪ್ರದೇಶದ ಪೊಲೀಸರು ಕೈ ಮಾಡಿರುವುದು ಖಂಡನೀಯ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.