ಡಿ.ಕೆ. ಸುರೇಶ್
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಸಂಸದ ಡಿ.ಕೆ. ಸುರೇಶ್ ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.
ಬಳಿಕ ಪ್ರತಿಕ್ರಿಯಿಸಿದ ಸುರೇಶ್, ‘ಮಳೆಯಿಂದಾಗಿ ರಸ್ತೆ ಗುಂಡಿಗಳು ಬಿದ್ದು ಸಮಸ್ಯೆ ಆಗಿದೆ. ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲು ಭೇಟಿ ಮಾಡಿದ್ದೆ. ಸರ್ಕಾರ ಅನುಮೋದನೆ ನೀಡಿದ ತಕ್ಷಣ ನನ್ನ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದರು.
ಮುಖ್ಯಮಂತ್ರಿ ಸ್ಥಾನ ಕುರಿತ ಚರ್ಚೆಯ ಬಗ್ಗೆ ಕೇಳಿದಾಗ, ‘ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ಮುಂದಿನ ದಿನಗಳಲ್ಲಿ ನಾನೂ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಸತೀಶ ಹೇಳಿರುವುದರಲ್ಲಿ ತಪ್ಪೇನೂ ಇಲ್ಲ. ಶಾಸಕರಾದವರಿಗೆ ಮಂತ್ರಿ ಆಗಬೇಕೆಂಬ ಆಸೆ, ಸಚಿವರಾದವರಿಗೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ. ಏನೂ ಇಲ್ಲದವರಿಗೆ ಶಾಸಕರಾಗಬೇಕೆಂಬ ಆಸೆ. ಇದೊಂದು ಸೈಕಲ್. ಯಾರೂ ತಪ್ಪಿಸಲು ಸಾಧ್ಯವಿಲ್ಲ’ ಎಂದರು.
ಬಿಜೆಪಿಯಿಂದ ಆಪರೇಷನ್ ಕಮಲ ಪ್ರಯತ್ನದ ವಿಚಾರವಾಗಿ ಪ್ರತಿಕ್ರಿಯಿಸಿದ ಸುರೇಶ್, ‘ಬಿಜೆಪಿಯವರಿಗೆ ಆಪರೇಷನ್ ಬಿಟ್ಟರೆ ಬೇರೆ ಇನ್ನೇನು ಗೊತ್ತಿದೆ? ಜನರಿಗೆ ಏನು ಬೇಕೋ ಅದನ್ನು ಮಾಡುವುದು ಅವರಿಗೆ ಗೊತ್ತಿಲ್ಲ. ನಮ್ಮ ಗ್ಯಾರಂಟಿಗಳಿಂದ ವರಿಗೆ ಆಘಾತ ಆಗಿದೆ. ಅದರಿಂದ ತಪ್ಪಿಸಿಕೊಳ್ಳಲು ‘ಆಪರೇಷನ್ ಕಮಲ’ದ ಹೆಸರು ಹೇಳುತ್ತಿದ್ದಾರೆ’ ಎಂದರು.
ಎರಡು ದಿನಗಳ ಹಿಂದೆ ಸತೀಶ ಅವರನ್ನು ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ್ದರು. ಇದೀಗ, ಅವರ ಸಹೋದರ ಡಿ.ಕೆ. ಸುರೇಶ್ ಭೇಟಿ ಮಾಡಿರುವುದು ಚರ್ಚೆ ಗ್ರಾಸವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.