ADVERTISEMENT

‘ರಾಮ್‌ ವಿರುದ್ಧ ಕ್ರಮ ಬೇಡ’

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 18:10 IST
Last Updated 9 ಮಾರ್ಚ್ 2019, 18:10 IST

ಬೆಂಗಳೂರು: ‘ರಫೇಲ್‌ ಯುದ್ಧ ವಿಮಾನ ಖರೀದಿ ಕುರಿತು ‘ದಿ ಹಿಂದೂ’ ಪತ್ರಿಕೆಯ ಪತ್ರಕರ್ತ ಎನ್‌.ರಾಮ್‌ ಅವರು ಬರೆದ ಲೇಖನದಲ್ಲಿ ರಾಷ್ಟ್ರೀಯ ಭದ್ರತೆಗೆ ಅಪಾಯ ತರುವ ಯಾವುದೇ ಅಂಶಗಳಿಲ್ಲ. ಆದ್ದರಿಂದ ಅವರ ವಿರುದ್ಧ ಸರ್ಕಾರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಮುಂದಾಗಿರುವುದು ಸಲ್ಲದು’ ಎಂದು ವಿವಿಧ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.

ಎಚ್.ಎಸ್.ದೊರೆಸ್ವಾಮಿ, ಬಿ.ಕೆ.ಚಂದ್ರಶೇಖರ್, ಕೆ.ಮರುಳಸಿದ್ದಪ್ಪ, ಬರಗೂರು ರಾಮಚಂದ್ರಪ್ಪ, ಸುಕನ್ಯಾ, ಜಿ.ರಾಮಕೃಷ್ಣ, ಹಿ.ಶಿ.ರಾಮಚಂದ್ರಗೌಡ, ಕಾಳೇಗೌಡ ನಾಗವಾರ, ಎಂ.ಎಸ್.ಮೂರ್ತಿ, ಶೂದ್ರ ಶ್ರೀನಿವಾಸ, ನಟರಾಜ ಹುಳಿಯಾರ್, ಎಸ್.ಎನ್.ನಾಗರಾಜ ರೆಡ್ಡಿ, ಜಿ.ಕೆ.ಗೋವಿಂದರಾವ್ ಮತ್ತು ಕೆ.ಎಸ್.ವಿಮಲಾ ಅವರು ಜಂಟಿಯಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ರಾಮ್‍ ಅವರ ಲೇಖನಗಳಲ್ಲಿ ದಾಖಲಿಸಿರುವ ಎಲ್ಲಾ ವಿವರಗಳು ಕೇವಲ ವಾಣಿಜ್ಯ ಒಪ್ಪಂದಗಳಿಗೆ ಸಂಬಂಧಿಸಿವೆ. ಅಲ್ಲಿ ರಾಷ್ಟ್ರದ ಭದ್ರತೆಗೆ ಅಪಾಯ ತರಬಹುದಾದ ಸಂಗತಿಗಳೇನೂ ಇಲ್ಲ. ‘ಬ್ಯಾಂಕ್ ಖಾತ್ರಿ’ ಇಲ್ಲದೆ ವಾಣಿಜ್ಯ ಒಪ್ಪಂದಕ್ಕೆ ಬರುವ ಸರ್ಕಾರದ ತಂತ್ರವನ್ನೇ ಈ ಲೇಖನಗಳು ಬಹಿರಂಗಪಡಿಸಿವೆ. ಈ ತಂತ್ರದಲ್ಲಿ ಕೆಲವರ ಹಿತಾಸಕ್ತಿಗಳನ್ನು ರಕ್ಷಿಸುವ ಹುನ್ನಾರವಿದೆ. ‘ದೇಶದ ಭದ್ರತೆ’ಯ ನೆಪ ಒಡ್ಡಿ ಎಲ್ಲಾ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸರ್ಕಾರವನ್ನು ನಾವು ನಂಬಬೇಕೇ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಕಡತಗಳನ್ನು ಪತ್ರಿಕೆಯವರು ಕದ್ದಿದ್ದಾರೆ.‘ಅಧಿಕೃತ ಮಾಹಿತಿ ಕಾಪಾಡುವ ಕಾಯ್ದೆ’ಪ್ರಕಾರ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅಟಾರ್ನಿ ಜನರಲ್‌ ಅವರು ವಾದ ಮಂಡಿಸಿದ್ದಾರೆ. ಈ ಕಾಯ್ದೆಯೇ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಪಳೆಯುಳಿಕೆ. ದೇಶಪ್ರೇಮದ ಹೆಸರಿನಲ್ಲಿ ಸಾಮ್ರಾಜ್ಯಶಾಹಿ ಕಾಯ್ದೆ ಕಾನೂನು ಜಾರಿಯಾಗಲು ಯಾರೂ ಬಿಡಬಾರದು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.