ಬೆಂಗಳೂರು: ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳದಂತೆ ಆಗ್ರಹಿಸಿ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ’ದಿಂದ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಸಮುದಾಯಗಳು ಇಲ್ಲದ ಪ್ರದೇಶಗಳಲ್ಲಿ ಕಟ್ಟಡಗಳನ್ನು, ವಿವಿಧ ಕಾಮಗಾರಿಗಳನ್ನು ಮಾಡಿದ ಇಲಾಖೆಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಶಿಕ್ಷಣ, ಆರೋಗ್ಯ, ಕಾರ್ಮಿಕ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗವಿಕಲರ ಅಭಿವೃದ್ಧಿ ಇಲಾಖೆಗಳನ್ನು ಹೊರತುಪಡಿಸಿ ಇತರ 29 ಇಲಾಖೆಗಳಲ್ಲಿ ಎಸ್‌ಸಿಎಸ್ಪಿ ಮತ್ತು ಟಿಎಸ್‌ಪಿ ಹಣ ಬಳಸುವುದನ್ನು ನಿಲ್ಲಿಸಬೇಕು ಎಂದು ಒಕ್ಕೂಟದ ರಾಜ್ಯ ಸಮಿತಿ ಮುಖಂಡರು ಆಗ್ರಹಿಸಿದರು.
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಹಂಚಿಕೆಯಲ್ಲೂ ಒಳ ಮೀಸಲಾತಿ ಕಲ್ಪಿಸಬೇಕು. ಗ್ಯಾರಂಟಿಗಳಿಗೆ ಸಾಮಾನ್ಯ ನಿಧಿಯಿಂದ ಖರ್ಚು ಮಾಡಬೇಕು. ಎಸ್‌ಸಿಎಸ್‌ಪಿ–ಟಿಎಸ್‌ಪಿ ಹಣ ಬಳಸಬಾರದು. ಕಳೆದ 10 ವರ್ಷಗಳಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ಹಣವನ್ನು ಬಳಸಿ ಅಭಿವೃದ್ಧಿಯಾಗಿರುವ ಕುಟುಂಬಗಳು ಮತ್ತು ಪ್ರದೇಶಗಳ ವಿವರಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಕೌತಾಳ್, ಮುಖಂಡರಾದ ಕರಿಯಪ್ಪ, ಸೋಮಶೇಖರ್ ಎಚ್.ಸಿ. ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.