ADVERTISEMENT

ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣ: ಅಳಿಯನ ಕಿರುಕುಳ; ಮಾವ ಆರೋಪ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 23:53 IST
Last Updated 15 ಅಕ್ಟೋಬರ್ 2025, 23:53 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ಬೆಂಗಳೂರು: ‘ಮದುವೆಯ ನಂತರ ಕೃತಿಕಾಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದ. ಮನೆಯ ಸಣ್ಣ ನಿರ್ಧಾರಗಳಿಗೂ ತನ್ನ ತಂದೆಯ ಒಪ್ಪಿಗೆ ಪಡೆಯಬೇಕೆಂದು ಮತ್ತು ವೈಯಕ್ತಿಕ ಖರ್ಚುಗಳನ್ನು ಆಕೆಯೇ ಭರಿಸಬೇಕೆಂದು ಅಳಿಯ ಮಹೇಂದ್ರ ರೆಡ್ಡಿ ಒತ್ತಾಯಿಸುತ್ತಿದ್ದ’ ಎಂದು ಕೊಲೆಯಾದ ಕೃತಿಕಾ ರೆಡ್ಡಿ ಅವರ ತಂದೆ ಮುನಿರೆಡ್ಡಿ ಆರೋಪಿಸಿದ್ದಾರೆ.

ADVERTISEMENT

‘ದೊಡ್ಡ ಆಸ್ಪತ್ರೆಯ ನಿರ್ಮಾಣಕ್ಕೆ ಹಣಕಾಸು ನೆರವು ಒದಗಿಸುವಂತೆ ಕೇಳಿದ್ದ. ಆಸ್ಪತ್ರೆ ನಿರ್ಮಾಣಕ್ಕೆ ಬೇಕಾಗುವಷ್ಟು ಹಣ ಇಲ್ಲ ಎಂದು ಮಾರತ್‌ಹಳ್ಳಿಯಲ್ಲಿರುವ ಸ್ವಂತ ಕಟ್ಟಡದಲ್ಲಿ ಕ್ಲಿನಿಕ್ ಮಾಡಿಕೊಟ್ಟಿದ್ದೆ. ಕೃತಿಕಾ ತನ್ನ ಪತಿಯನ್ನು ಸಂಪೂರ್ಣವಾಗಿ ನಂಬಿದ್ದರು. ಜೀವ ಉಳಿಸಬೇಕಾದ ವ್ಯಕ್ತಿ, ಈ ರೀತಿ ಜೀವ ತೆಗೆಯುವ ಕೆಲಸ ಮಾಡಿದ್ದಾರೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಅಳಿಯನ ಕೃತ್ಯ ಗೊತ್ತಾಗಿದೆ. ನಮ್ಮ ಮಗಳು ಬೇಡವಾಗಿದ್ದರೆ ವಿಚ್ಛೇದನ ಕೊಡಬಹುದಿತ್ತು. ಆದರೆ, ಈ ರೀತಿ ಹತ್ಯೆ ಮಾಡಿರುವುದು ಎಷ್ಟು ಸರಿ? ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.

‘ಕೃತಿಕಾ ಅವರಿಗೆ ನೀಡಿರುವ ಅನಸ್ತೇಷಿಯಾವನ್ನು ಕೇವಲ ಆಪರೇಷನ್‌ ಕೊಠಡಿಯಲ್ಲಿ ಮಾತ್ರ ಬಳಸಬೇಕು. ಆದರೆ, ಮಹೇಂದ್ರ ರೆಡ್ಡಿ ಅವರು ತನ್ನ ಪ್ರಭಾವ ಬಳಸಿ ಆಸ್ಪತ್ರೆಯಿಂದ ತಂದು, ಪತ್ನಿಗೆ ನೀಡಿದ್ದಾರೆ. ಮತ್ತೊಂದೆಡೆ ಪತ್ನಿ ಮೃತಪಟ್ಟ ಬಳಿಕ ಆಕೆಯ ಕುಟುಂಬ ಸದಸ್ಯರಿಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯದಂತೆ ತಡೆಯಲು ಪೊಲೀಸರಿಗೆ ಪ್ರಚೋದನೆ ನೀಡಿದ್ದರು’ ಎಂದು ಆರೋಪಿಸಲಾಗಿದೆ.

ಪುತ್ರಿ ಕೃತಿಕಾ ವಾಸವಾಗಿದ್ದ ಮನೆಯನ್ನು ತಂದೆ ಮುನಿರೆಡ್ಡಿ, ದೇವಾಲಯವೊಂದಕ್ಕೆ ದಾನ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಆ ಮನೆ ನೋಡಿದರೆ ಪದೇ ಪದೇ ಮಗಳ ನೆನಪು ಕಾಡುತ್ತದೆ. ಹೀಗಾಗಿ ಮನೆ ದಾನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೈದೇಹಿ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿ ಪಡೆದಿದ್ದ ಕೃತಿಕಾ ರೆಡ್ಡಿ, ರಾಯಚೂರಿನಲ್ಲಿ ನವೋದಯ ಮೆಡಿಕಲ್‌ ಕಾಲೇಜಿನಲ್ಲಿ ಚರ್ಮರೋಗ ವಿಭಾಗದಲ್ಲಿ ಸ್ನಾನಕೋತ್ತರ ಪದವಿ ಪಡೆದಿದ್ದರು.

ಸೋಕೊ ತಂಡಕ್ಕೆ ಕಮಿಷನರ್ ಶ್ಲಾಘನೆ: ‘ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಕ್ಯಾನೂಲಾ ಸೆಟ್, ಇಂಜೆಕ್ಷನ್ ಟ್ಯೂಬ್ ಹಾಗೂ ಇತರೆ ವೈದ್ಯಕೀಯ ಪರಿಕರಗಳನ್ನು ಸೋಕೊ ತಂಡ ಸಂಗ್ರಹ ಮಾಡಿ ಎಫ್‌ಎಸ್‌ಎಲ್‌ಗೆ ನೀಡಿತ್ತು. ಎಫ್‌ಎಸ್‌ಎಲ್ ವರದಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಇದರಲ್ಲಿ ಸೋಕೊ ತಂಡದ ಕಾರ್ಯ ಮಹತ್ತರವಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ ಕುಮಾರ್ ಸಿಂಗ್ ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.