ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮುಖಗವಸು (ಮಾಸ್ಕ್) ಧರಿಸಬೇಕು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಸೂಚಿಸಿದ್ದಾರೆ.
ಕೋವಿಡ್‌ಗೆ ಸಂಬಂಧಿಸಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಹಾಗೂ ಆಸ್ಪತ್ರೆಗಳ ಮುಖ್ಯಸ್ಥರ ಜತೆಗೆ ಮಂಗಳವಾರ ಅವರು ವಿಡಿಯೊ ಕಾನ್ಫರೆನ್ಸ್ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಜನದಟ್ಟಣೆ ಇರುವ ಸ್ಥಳಗಳಲ್ಲಿ ಗರ್ಭಿಣಿಯರು, ಹಿರಿಯರು ಮುಖಗವಸು ಬಳಕೆ ಮಾಡಬೇಕು. ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದು, ಜನರು ಕೂಡ ನಮ್ಮ ಜತೆಗೆ ಕೈ ಜೋಡಿಸಬೇಕು’ ಎಂದು ಹೇಳಿದರು.
‘ಶಾಲೆಗಳು ಪುನರಾರಂಭ ಆಗುತ್ತಿವೆ. ಜ್ವರ, ಶೀತ ಮತ್ತು ಕೆಮ್ಮು ಇದ್ದರೆ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬಾರದು. ಒಂದು ವೇಳೆ ಶೀತ, ನೆಗಡಿಯ ಸಮಸ್ಯೆ ಇರುವ ಮಕ್ಕಳು ಶಾಲೆಗೆ ಬಂದರೆ ಕೂಡಲೇ ಪೋಷಕರಿಗೆ ಕರೆ ಮಾಡಿ, ವಾಪಸ್ ಕಳುಹಿಸಬೇಕು’ ಎಂದರು.
‘ಉಸಿರಾಟದ ತೀವ್ರ ಸಮಸ್ಯೆ (ಸಾರಿ) ಪ್ರಕರಣಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಬೇಕು. ವೈದ್ಯಕೀಯ ಆಮ್ಲಜನಕದ ಸಂಪರ್ಕ ಹೊಂದಿರುವ ಬೆಡ್‌ಗಳು, ವೆಂಟಿಲೇಟರ್‌ಗಳ ಬಗ್ಗೆ ಮಾಹಿತಿ ಒದಗಿಸುವಂತೆ ವೈದ್ಯಕೀಯ ಸಂಸ್ಥೆ ಹಾಗೂ ಆಸ್ಪತ್ರೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ’ ಎಂದು ಸಚಿವರು ತಿಳಿಸಿದರು.
‘ಮುಖಗವಸು ಕಡ್ಡಾಯದ ಅಗತ್ಯವಿಲ್ಲ’
‘ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದರೂ ಮುಖಗವಸನ್ನು ಎಲ್ಲರಿಗೂ ಕಡ್ಡಾಯಗೊಳಿಸುವ ಅಗತ್ಯವಿಲ್ಲ. ಜ್ವರ ಶೀತ ನೆಗಡಿ ಇದ್ದವರು ಮುಖಗವಸು ಧರಿಸಿದರೆ ಸಾಕು. ಈ ಬಾರಿ ಮಳೆ ಹೆಚ್ಚಾಗಿರುವುದರಿಂದ ಹವಾಮಾನ ಕೂಡ ಬದಲಾಗಿದೆ. ಇದರಿಂದಲೂ ಜ್ವರ ನೆಗಡಿ ಕೆಮ್ಮು ಬರುತ್ತಿದೆ’ ಎಂದು ಶರಣ ಪ್ರಕಾಶ ಪಾಟೀಲ ಸ್ಪಷ್ಟಪಡಿಸಿದರು. ‘ಬೆಂಗಳೂರಿನಲ್ಲಿ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಆದರೆ ದೊಡ್ಡ ಪ್ರಮಾಣದಲ್ಲಿ ಹರಡುತ್ತಿಲ್ಲ. ಆದ್ದರಿಂದ ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ. ಲಸಿಕಾಕರಣ ಈಗಾಗಲೇ ಆಗಿದೆ. ಅಗತ್ಯವಿದ್ದಲ್ಲಿ ಆರೋಗ್ಯ ಸಚಿವಾಲಯದ ಜತೆಗೆ ಚರ್ಚಿಸಿ ಲಸಿಕೆ ತರಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.