ADVERTISEMENT

ಕೋವಿಡ್‌–19 | ರೋಗಿಗಳ ಜಾಡು ಪತ್ತೆಗೆ ಸಿಡಿಆರ್ ಮೊರೆ

ಸಂಪರ್ಕಿತರ ಮಾಹಿತಿ ಮುಚ್ಚಿಡುತ್ತಿರುವ ರೋಗಿಗಳು

ಪ್ರವೀಣ ಕುಮಾರ್ ಪಿ.ವಿ.
Published 30 ಏಪ್ರಿಲ್ 2020, 21:31 IST
Last Updated 30 ಏಪ್ರಿಲ್ 2020, 21:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌–19 ಸೋಂಕು ದೃಢಪಟ್ಟ ಕೆಲ ರೋಗಿಗಳು ತಮ್ಮ ಪ್ರಯಾಣದ ಮಾಹಿತಿ ಹಾಗೂ ಯಾರು ತಮ್ಮ ಸಂಪರ್ಕಕ್ಕೆ ಬಂದಿದ್ದರು ಎಂಬ ವಿವರಗಳನ್ನು ಮುಚ್ಚಿಡುತ್ತಿರುವುದು ಆರೋಗ್ಯ ಇಲಾಖೆ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಸೋಂಕಿತರ ಕುರಿತ ನಿಖರ ಮಾಹಿತಿ ಕಲೆಹಾಕಲು ಅಧಿಕಾರಿಗಳು ಅವರ ಮೊಬೈಲ್‌ ಕರೆ ವಿವರಗಳ (ಸಿಡಿಆರ್‌) ಮೊರೆ ಹೋಗುತ್ತಿದ್ದಾರೆ.

‘ಆರಂಭದಲ್ಲಿ ನಾವು ಕೋವಿಡ್‌–19 ರೋಗಿಗಳು ನೀಡುತ್ತಿದ್ದ ಮಾಹಿತಿಗಳನ್ನಷ್ಟೇ ಆಧರಿಸಿ ಅವರಿಗೆ ಸೋಂಕು ಹೇಗೆ ತಗುಲಿರಬಹುದು ಎಂದು ವಿಶ್ಲೇಷಿಸುತ್ತಿದ್ದೆವು. ಅವರ ನೇರ ಹಾಗೂ ಪರೋಕ್ಷ ಸಂಪರ್ಕಕ್ಕೆ ಬಂದವರ ಪ್ರತ್ಯೇಕ ವಾಸಕ್ಕೆ ಶಿಫಾರಸು ಮಾಡುತ್ತಿದ್ದೆವು. ಆದರೆ, ಇತ್ತೀಚೆಗೆ ರೋಗ ಪತ್ತೆಯಾದ ಕೆಲ ಪ್ರಕರಣ ವಿಶ್ಲೇಷಿಸಿದಾಗ ಈ ಹಿಂದೆ ಸೋಂಕು ದೃಢಪಟ್ಟ ಕೆಲವರು ನಮ್ಮ ಜೊತೆ ಪೂರ್ತಿ ಮಾಹಿತಿ ಹಂಚಿಕೊಂಡಿಲ್ಲ ಎಂಬುದು ತಿಳಿದು ಬಂತು’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸೋಂಕು ತಗಲುವ ಮುನ್ನ ಒಂದು ತಿಂಗಳಲ್ಲಿ ಯಾವೆಲ್ಲ ಪ್ರದೇಶಗಳಿಗೆ ಭೇಟಿ ನೀಡಿದ್ದೆವು ಎಂಬ ಪೂರ್ತಿ ವಿವರಗಳನ್ನು ಅನೇಕರು ಹಂಚಿಕೊಂಡಿರಲಿಲ್ಲ. ಹಾಗಾಗಿ ನಾವೀಗ ಸೋಂಕಿತರ ಮೊಬೈಲ್‌ ಕರೆಗಳ ವಿವರಗಳ (ಸಿಡಿಆರ್‌) ದಾಖಲೆಗಳನ್ನು ಬಳಸಿ ಆದಷ್ಟು ಖಚಿತವಾದ ಮಾಹಿತಿ ಕಲೆ ಹಾಕುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ADVERTISEMENT

‘ಸೋಂಕಿತರು ಕೆಲವೊಂದು ವಿಚಾರಗಳನ್ನು ನಮ್ಮಿಂದ ಮುಚ್ಚಿಡಬಹುದು. ಆದರೆ, ಅವರು ಹಂಚಿಕೊಂಡ ಮಾಹಿತಿ ಹಾಗೂ ಅವರ ಮೊಬೈಲ್‌ ಕರೆಗಳ ಮಾಹಿತಿ ತಾಳೆ ಹಾಕಿದಾಗ ಅವರು ಏನನ್ನೋ ಮುಚ್ಚಿಟ್ಟಿದ್ದಾರೆ ಎಂಬುದು ನಮಗೆ ಮನದಟ್ಟಾಗುತ್ತದೆ. ಸಂದೇಹ ಬಂದರೆ, ರೋಗ ಲಕ್ಷಣ ಕಾಣಿಸಿಕೊಂಡ ಸಂದರ್ಭದಲ್ಲಿ ಅವರು ಯಾರಿಗೆಲ್ಲ ಕರೆ ಮಾಡಿದ್ದರು ಎಂದು ನೋಡಿಕೊಂಡು ಆ ಸಂಖ್ಯೆಗಳಿಗೆ ನಾವೂ ಕರೆ ಮಾಡಿ ಹೆಚ್ಚುವರಿ ಮಾಹಿತಿ ಕಲೆ ಹಾಕುತ್ತಿದ್ದೇವೆ. ಅನೇಕ ಸಂದರ್ಭದಲ್ಲಿ ಇದರಿಂದಾಗಿಯೇ ನಮಗೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚುವುದು ಸಾಧ್ಯವಾಗಿದೆ’ ಎಂದು ಅವರು ವಿವರಿಸಿದರು.

‘ಕೆಲವರಿಗೆ ಯಾವುದೇ ರೋಗ ಲಕ್ಷಣ ಇರುವುದಿಲ್ಲ. ಅಂತವರು ತಮಗೆ ಕೋವಿಡ್‌ ಇದೆ ಎಂಬುದನ್ನೇ ಒಪ್ಪಲು ಸಿದ್ಧರಿರುವುದಿಲ್ಲ. ಹಾಗಾಗಿ ಮಾಹಿತಿ ಮುಚ್ಚಿಡುತ್ತಾರೆ. ಇನ್ನು ಕೆಲವರು, ತಮ್ಮ ಸಂಪರ್ಕಕ್ಕೆ ಬಂದವರ ಹೆಸರು ಹೇಳಿ ಬಿಟ್ಟರೆ ಅವರೂ 28 ದಿನ ಪ್ರತ್ಯೇಕ ವಾಸ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಮಾಹಿತಿ ಮುಚ್ಚಿಡುತ್ತಿದ್ದಾರೆ’ ಎಂದರು.

***
‘ಕೌನ್ಸೆಲಿಂಗ್‌ ಮೂಲಕ ಧೈರ್ಯ ತುಂಬುತ್ತೇವೆ’
‘ಅನೇಕರು ತಮಗೆ ಕೋವಿಡ್‌ 19 ಸೋಂಕು ತಗುಲಿದೆ ಎಂಬ ವಿಷಯ ತಿಳಿದ ತಕ್ಷಣ ದಂಗಾಗುತ್ತಾರೆ. ದುಃಖದಲ್ಲಿ ಯಾವುದೇ ಮಾಹಿತಿ ಹಂಚಿಕೊಳ್ಳುವಷ್ಟು ಶಕ್ತಿ ಹೊಂದಿರುವುದಿಲ್ಲ. ಅವರ ಕುಟುಂಬಸ್ಥರೂ ಈ ಕಹಿ ಸತ್ಯವನ್ನು ಅರಗಿಸಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಮಾಹಿತಿ ಪಡೆಯಲು ಅವರನ್ನು ತಜ್ಞರಿಂದ ಆಪ್ತಸಮಾಲೋಚನೆಗೆ (ಕೌನ್ಸೆಲಿಂಗ್‌) ಒಳಪಡಿಸಿ ಧೈರ್ಯ ತುಂಬುತ್ತೇವೆ. ಚಿಕಿತ್ಸೆಯಿಂದ ಗುಣಮುಖರಾದವರ ಉದಾಹರಣೆ ನೀಡಿ ಅವರನ್ನು ಮಾನಸಿಕವಾಗಿ ಸಜ್ಜುಗೊಳಿಸುತ್ತೇವೆ’ ಎಂದು ಅಧಿಕಾರಿ ತಿಳಿಸಿದರು.

‘ಬಾಯಿ ಬಿಡಿಸಲು ಪೊಲೀಸರ ನೆರವು’
’ಕೆಲವು ಪ್ರಕರಣಗಳಲ್ಲಿ ಸೋಂಕಿತರ ಹಿನ್ನೆಲೆ ಕಲೆ ಹಾಕಲು ಪೊಲೀಸರ ನೆರವು ಪಡೆದ ಉದಾಹರಣೆಗಳೂ ಇವೆ. ವೈದ್ಯರ ನಯವಾದ ಮಾತಿಗೆ ಬೆಲೆ ಕೊಡದವರು ಪೊಲೀಸ್‌ ಅಧಿಕಾರಿಗಳ ಖಡಕ್‌ ಪ್ರಶ್ನೆಗಳಿಗೆ, ತಾವು ಎಲ್ಲೆಲ್ಲಿ ಹೋಗಿದ್ದೆವು, ಯಾರನ್ನು ಭೇಟಿಯಾಗಿದ್ದೆವು ಎಂಬೆಲ್ಲ ವಿವರಗಳನ್ನೂ ಚಾಚೂತಪ್ಪದೇ ಒಪ್ಪಿಸಿದ್ದಾರೆ. ಮೊಬೈಲ್‌ ಕರೆಗಳ ವಿವರ ಬಳಸಲು ಆರಂಭಿಸಿದ ಬಳಿಕ ಇಂತಹ ಜಿಗುಟು ರೋಗಿಗಳ ಬಾಯಿ ಬಿಡಿಸುವುದು ಸುಲಭವಾಗಿದೆ’ ಎಂದು ಅಧಿಕಾರಿ ವಿವರಿಸಿದರು.

**
ವೈದ್ಯರು ಸೋಂಕಿತರ ವಿವರ ಕಲೆಹಾಕುವುದು ಅವರ ಬಂಧುಗಳನ್ನು ಸೋಂಕಿನಿಂದ ರಕ್ಷಿಸಲು. ಸಮಾಜದಲ್ಲಿ ಇನ್ನಷ್ಟು ಮಂದಿಗೆ ಸೋಂಕು ಹರಡದಂತೆ ತಡೆಯಲು. ಸೋಂಕಿತರು ಮುಚ್ಚುಮರೆ ಮಾಡದೆ ಎಲ್ಲ ಮಾಹಿತಿ ನೀಡಬೇಕು.
-ಡಾ.ಬಿ.ಕೆ.ವಿಜಯೇಂದ್ರ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.