ADVERTISEMENT

ಶಂಕಿತ ಉಗ್ರ ವಾಸವಿದ್ದ ಮನೆಯಲ್ಲೇ ಮಿನಿ ಲ್ಯಾಬ್: 50 ಬಾಂಬ್‌ಗೆ ಬೇಕಾದಷ್ಟು ಸ್ಫೋಟಕ

ರಾಸಾಯನಿಕ, ಕಚ್ಚಾ ವಸ್ತು ಪತ್ತೆ

ಸಂತೋಷ ಜಿಗಳಿಕೊಪ್ಪ
Published 8 ಜುಲೈ 2019, 20:18 IST
Last Updated 8 ಜುಲೈ 2019, 20:18 IST
ಶಂಕಿತ ಉಗ್ರರು ಉಳಿದುಕೊಂಡಿದ್ದ ಚಿಕ್ಕಬಾಣಾವರದ ಮನೆ
ಶಂಕಿತ ಉಗ್ರರು ಉಳಿದುಕೊಂಡಿದ್ದ ಚಿಕ್ಕಬಾಣಾವರದ ಮನೆ   

ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಸಂಬಂಧ ಎನ್‌ಐಎ ಅಧಿಕಾರಿಗಳು ಬಂಧಿಸಿರುವಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ (30) ವಾಸವಿದ್ದ ಚಿಕ್ಕಬಾಣಾವರದ ಮನೆಯಲ್ಲಿ50ಕ್ಕೂ ಹೆಚ್ಚು ಟಿಫಿನ್ ಬಾಕ್ಸ್‌ ಬಾಂಬ್‌ ಸಿದ್ಧಪಡಿಸುವಷ್ಟು ಸ್ಫೋಟಕಗಳು ಪತ್ತೆ ಆಗಿರುವುದಾಗಿ ಮೂಲಗಳು ತಿಳಿಸಿವೆ.

ದೊಡ್ಡಬಳ್ಳಾಪುರದಲ್ಲಿ ಜೂನ್ 25ರಂದು ಹಬೀಬುರ್‌ನನ್ನು ಬಂಧಿ ಸಿದ್ದ ಎನ್‌ಐಎ ಅಧಿಕಾರಿಗಳು, ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಬಾಂಬ್‌ ತಯಾರಿಕೆಗಾಗಿ ಚಿಕ್ಕಬಾಣಾವರದ ಹಳೇ ರೈಲ್ವೆ ರಸ್ತೆಯ ಮನೆಯಲ್ಲಿ ಮಿನಿ ಲ್ಯಾಬ್ ಮಾಡಿಕೊಂಡಿದ್ದ ವಿಷಯವನ್ನು ಬಾಯ್ಬಿಟ್ಟಿದ್ದ.

ಅದೇ ಮಾಹಿತಿ ಆಧರಿಸಿ ಮನೆ ಮೇಲೆ ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳು, ಮನೆಯೊಳಗಿದ್ದ ಮಿನಿ ಲ್ಯಾಬ್ ಕಂಡು ಹೌಹಾರಿದ್ದಾರೆ. ಬೆಂಗಳೂರು ಉತ್ತರ ವಿಭಾಗದ ಪೊಲೀಸರ ಸಹಕಾರದಲ್ಲಿ ಭಾನುವಾರ ಸಂಜೆಯಿಂದಲೇ ಮನೆಯಲ್ಲಿ ಶೋಧ ನಡೆಸುತ್ತಿರುವ ಅಧಿಕಾರಿಗಳು, ಸೋಮವಾರ ರಾತ್ರಿಯವರೆಗೂ ತಮ್ಮ ಶೋಧ ಕಾರ್ಯ ಮುಂದುವರಿಸಿದ್ದರು.

ADVERTISEMENT

‘ಬಳೆ ಹಾಗೂ ಉಂಗುರ ಮಾರಾಟಗಾರರ ಸೋಗಿನಲ್ಲಿ ಚಿಕ್ಕಬಾಣಾವರಕ್ಕೆ ಬಂದಿದ್ದಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ ಹಾಗೂ ಆತನ ಇಬ್ಬರು ಸಹಚರರು, ಸ್ಥಳೀಯ ನಿವಾಸಿ ಮಸ್ತಾನ್ ಎಂಬುವರ ಮಾಲೀಕತ್ವದ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಅದೇ ಮನೆಯಲ್ಲೇ 2ವರ್ಷಗಳಿಂದ ವಾಸವಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಾಡಿಗೆ ಮನೆಯಿಂದ ದೂರವಿ ರುವ ಮತ್ತೊಂದು ಮನೆಯಲ್ಲಿ ಮಸ್ತಾನ್‌ ಅವರು ಕುಟುಂಬ ಸಮೇತ ನೆಲೆಸಿದ್ದಾರೆ. ಪ್ರತಿ ತಿಂಗಳು ಬಾಡಿಗೆ ಪಡೆಯಲು ಮಾತ್ರ ಅವರು ಆರೋಪಿಗಳ ಮನೆಗೆ ಹೋಗಿ ಬರುತ್ತಿದ್ದರು. ಮನೆಯೊಳಗೆ ಮಿನಿ ಲ್ಯಾಬ್‌ ಇದ್ದ ಸಂಗತಿ ಅವರಿಗೂ ಗೊತ್ತಿರಲಿಲ್ಲ’ ಎಂದು ಮೂಲಗಳು ಹೇಳಿವೆ.

ರಾಶಿ ರಾಶಿ ಸ್ಫೋಟಕ: ‘ಶಂಕಿತ ಉಗ್ರರು, ರಾಶಿ ರಾಶಿ ಸ್ಫೋಟಕಗಳನ್ನು ಮನೆಯಲ್ಲಿ ತಂದಿಟ್ಟುಕೊಂಡಿದ್ದರು. ಅವುಗಳನ್ನು ಬಳಸಿ50ಕ್ಕೂ ಹೆಚ್ಚು ಟಿಫಿನ್ ಬಾಕ್ಸ್‌ ಬಾಂಬ್‌ಗಳನ್ನು ಸಿದ್ಧಪಡಿಸುವುದು ಅವರ ಉದ್ದೇಶವಾಗಿತ್ತು. ಈಗ ಎಲ್ಲ ಸ್ಫೋಟಕಗಳನ್ನೂ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಾಂಬ್‌ ತಯಾರಿಸಲು ಬೇಕಾಗುವ ವೈರ್‌, ಪೈಪ್‌, ಕನೆಕ್ಟರ್‌ಗಳು, ಕಬ್ಬಿಣ ಕತ್ತ ರಿಸುವ ಉಪಕರಣ, ಅಮೋನಿಯಂ ಸಲ್ಫೇಟ್ ಸಹಿತ ಹಲವು ರಾಸಾಯನಿಕಗಳು, ಡಿಟೋನೇಟರ್, ಗ್ಯಾಸ್‌ ಸಿಲಿಂಡರ್, ಗಾಜಿನ ಪಾತ್ರೆ ಹಾಗೂ ಹಲವು ವಸ್ತುಗಳು ಸಹ ಮನೆಯಲ್ಲಿ ಸಿಕ್ಕಿವೆ’ ಎಂದು ಹೇಳಿವೆ.

‘ಶಂಕಿತ ಉಗ್ರರು, ರಾಸಾಯನ ವಿಜ್ಞಾನ ಪುಸ್ತಕಗಳನ್ನು ಓದಿಕೊಂಡೇ ಬಾಂಬ್‌ ಸಿದ್ಧಪಡಿಸುತ್ತಿದ್ದರು. ಮ 5ಕ್ಕೂ ಹೆಚ್ಚು ಪುಸ್ತಕಗಳೂ ಪತ್ತೆಯಾಗಿವೆ’ ಎಂದು ಮೂಲಗಳು ತಿಳಿಸಿವೆ.

ತಿಂಗಳಿಗೆ ₹3,800 ಬಾಡಿಗೆ
‘ಆರೋಪಿಗಳು ವ್ಯಾಪಾರಿಗಳು ಇರಬಹುದೆಂದು ನಂಬಿದ್ದ ಮಾಲೀಕ ಮಸ್ತಾನ್, ತಿಂಗಳಿಗೆ ₹ 3,800 ಬಾಡಿಗೆ ನಿಗದಿಪಡಿಸಿ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು. ಈ ಬಗ್ಗೆ ಮಾಲೀಕ ಹೇಳಿಕೆ ನೀಡಿದ್ದಾನೆ’ ಎಂದು ಮೂಲಗಳು ಹೇಳಿವೆ.

‘ಬಾಡಿಗೆಗೂ ಮುನ್ನವೇ ₹10 ಸಾವಿರ ಮುಂಗಡ ಹಣವನ್ನೂ ಮಾಲೀಕ ಪಡೆದಿದ್ದರು. ಶಂಕಿತ ಉಗ್ರರು, ಪ್ರತಿ ತಿಂಗಳು ತಪ್ಪದೇ ಬಾಡಿಗೆ ಹಣ ಪಾವತಿಸುತ್ತಿದ್ದರು. ಒಂದೂವರೆ ತಿಂಗಳ ಹಿಂದಷ್ಟೇ ಊರಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಶಂಕಿತರು, ವಾಪಸ್ ಬಂದಿರಲಿಲ್ಲ. ಅವರು ಬರಬಹುದೆಂದೇ ಮಾಲೀಕರು ತಿಳಿದಿದ್ದರು. ಅಷ್ಟರಲ್ಲೇ ಎನ್‌ಐಎ ಅಧಿಕಾರಿಗಳು, ಮನೆಗೆ ಬಂದು ಶೋಧ ನಡೆಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.