ADVERTISEMENT

ನಾಯಿ ಕಡಿತ: ಗಾಯಾಳುಗಳ ಸಂಖ್ಯೆ ಏರುಗತಿ 

ಈ ವರ್ಷ ರಾಜ್ಯದಲ್ಲಿ ಗರಿಷ್ಠ ಪ್ರಕರಣಗಳು ವರದಿ * ರೇಬಿಸ್ ಕಾಯಿಲೆಯಿಂದ 31 ಸಾವು

ವರುಣ ಹೆಗಡೆ
Published 2 ನವೆಂಬರ್ 2025, 20:35 IST
Last Updated 2 ನವೆಂಬರ್ 2025, 20:35 IST
.
.   

ಬೆಂಗಳೂರು: ರಾಜ್ಯದಲ್ಲಿ ನಾಯಿ ಕಡಿತದಿಂದ ಗಾಯಗೊಳ್ಳುವವರ ಸಂಖ್ಯೆ ಏರುಗತಿ ಪಡೆದಿದ್ದು, ಈ ವರ್ಷ ವರದಿಯಾದ ಒಟ್ಟು ನಾಯಿ ಕಡಿತ ಪ್ರಕರಣಗಳು ನಾಲ್ಕು ಲಕ್ಷದ ಗಡಿ (3.97 ಲಕ್ಷ) ಸಮೀಪಿಸಿದೆ. ವರ್ಷವೊಂದರಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿವೆ. 

ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು ಸೇರಿ ವಿವಿಧ ವಯೋಮಾನದವರು ನಾಯಿ ಕಡಿತದಿಂದ ಗಾಯಗೊಳ್ಳುತ್ತಿದ್ದಾರೆ. ಈ ಕಡಿತದ ಸಂಬಂಧ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಾಗಿದೆ. 2030ರ ವೇಳೆಗೆ ನಾಯಿ ಕಡಿತದಿಂದ ಬರುವ ‘ರೇಬಿಸ್‌’ ರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿದೆ. ಈ ಸಂಬಂಧ ನಾಯಿ ಕಡಿತವನ್ನು 2021ರಲ್ಲಿ ‘ಘೋಷಿತ ಕಾಯಿಲೆ’ಯ ವ್ಯಾಪ್ತಿಗೆ ತರಲಾಗಿದೆ. ಇದರಿಂದಾಗಿ ನಾಯಿ ಕಡಿತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ಒದಗಿಸಲಾಗುತ್ತಿದೆ. ಇಷ್ಟಾಗಿಯೂ ಈ ವರ್ಷ ನಾಯಿ ಕಡಿತಕ್ಕೆ ಒಳಗಾದವರಲ್ಲಿ 31 ಮಂದಿ ರೇಬಿಸ್‌ನಿಂದ ಈಗಾಗಲೇ ಮೃತಪಟ್ಟಿದ್ದಾರೆ. 

ವರ್ಷದಿಂದ ವರ್ಷಕ್ಕೆ ನಾಯಿ ಕಡಿತ ಹೆಚ್ಚುತ್ತಲೇ ಇದೆ. ಕಳೆದ ವರ್ಷ 3.61 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ನಾಯಿ ಕಡಿತದಿಂದಾದ ಗಾಯಗಳಿಂದ ಬಳಲಿದವರಲ್ಲಿ, 42 ಮಂದಿ ರೇಬಿಸ್‌ನಿಂದ ಸಾವಿಗೀಡಾಗಿದ್ದರು. ಈ ವರ್ಷ ಅಕ್ಟೋಬರ್ ಅಂತ್ಯಕ್ಕೇ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷದ ಗಡಿ ಸಮೀಪಿಸಿದ್ದು, ಇಲಾಖೆ ಪ್ರಕಾರ ಪ್ರತಿ ವಾರ ಸರಾಸರಿ 10 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ.

ADVERTISEMENT

ಪ್ರಕರಣ ಏರುಗತಿ: ಈ ವರ್ಷ ಮೊದಲ ಆರು ತಿಂಗಳಲ್ಲಿ 2.3 ಲಕ್ಷ ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದವು. ನಂತರದ ನಾಲ್ಕು ತಿಂಗಳಲ್ಲಿ 1.66 ಲಕ್ಷ ಮಂದಿ ಗಾಯಗೊಂಡಿದ್ದಾರೆ. ಆರೋಗ್ಯ ಇಲಾಖೆಯ ವಿಶ್ಲೇಷಣೆ ಪ್ರಕಾರ, ಮೊದಲ ಆರು ತಿಂಗಳು ಪ್ರತಿ ವಾರ ವರದಿಯಾಗುತ್ತಿದ್ದ ಪ್ರಕರಣಗಳ ಸಂಖ್ಯೆ ಏರಿಳಿತವಾಗುತ್ತಿತ್ತು. ಆಗಸ್ಟ್‌ ಬಳಿಕ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದಿದ್ದು, ವಾರದ ಪ್ರಕಾರ ನಡೆಸಲಾದ ವಿಶ್ಲೇಷಣೆಯಲ್ಲಿ ಬಹುತೇಕ ವಾರ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ 10 ಸಾವಿರದ ಗಡಿ ತಲುಪುತ್ತಿದೆ.

‘ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ರೇಬಿಸ್ ನಿರೋಧಕ ಲಸಿಕೆಯು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೇಲ್ಮಟ್ಟದ ಆಸ್ಪತ್ರೆಗಳಲ್ಲಿ ಲಭ್ಯವಿದೆ. ‘ರೇಬಿಸ್ ಇಮ್ಯುನೊಗ್ಲೋಬ್ಯುಲಿನ್’ (ಆರ್‌ಐಜಿ) ಚುಚ್ಚುಮದ್ದು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮೇಲ್ಮಟ್ಟದ ಆಸ್ಪತ್ರೆಗಳಲ್ಲಿ ದೊರೆಯುತ್ತದೆ. ಈ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಿಂಗಳಿಗೆ 40 ಸಾವಿರ ಪ್ರಕರಣ

ಆರೋಗ್ಯ ಇಲಾಖೆಯ ಪ್ರಕಾರ ರಾಜ್ಯದಲ್ಲಿ ತಿಂಗಳಿಗೆ ಸರಾಸರಿ 40 ಸಾವಿರ ನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತಿವೆ. ನಾಯಿ ಕಡಿತಕ್ಕೆ ಒಳಗಾದವರಿಗೆ ಇಲಾಖೆ ವತಿಯಿಂದ ಆ್ಯಂಟಿ ರೇಬಿಸ್ ಲಸಿಕೆ ಮತ್ತು ರೇಬಿಸ್ ಇಮ್ಯುನೊಗ್ಲೋಬ್ಯುಲಿನ್ ಲಸಿಕೆ ಒದಗಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಔಷಧ ಸರಬರಾಜು ನಿಗಮವು (ಕೆಎಸ್‌ಎಂಎಸ್‌ಸಿಎಲ್) ರಾಜ್ಯದ ಆಸ್ಪತ್ರೆಗಳಿಗೆ ಈ ಔಷಧಗಳನ್ನು ಪೂರೈಕೆ ಮಾಡುತ್ತಿದೆ. ಈ ಜೀವ ರಕ್ಷಕ ಲಸಿಕೆಗಳ ಸೂಕ್ತ ಬಳಕೆ ಹಾಗೂ ಕೊರತೆಯಾಗದಂತೆ ನೋಡಿಕೊಳ್ಳಲು ಹೆಚ್ಚುವರಿ ಔಷಧವನ್ನು ಸ್ಥಳೀಯವಾಗಿ ಖರೀದಿಸಲು ಇಲಾಖೆಯು ಆಸ್ಪತ್ರೆಗಳಿಗೆ ಸೂಚಿಸಿದೆ.

ಕಡಿತದ ವರದಿ ಕಡ್ಡಾಯ

  ನಾಯಿ ಕಡಿತವನ್ನು‘ಘೋಷಿತ ಕಾಯಿಲೆ’ಯ ವ್ಯಾಪ್ತಿಗೆ ತರಲಾಗಿರುವುದರಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಮಾಹಿತಿ ಲಭ್ಯವಾಗುತ್ತಿದೆ. ಆಸ್ಪತ್ರೆಗಳು ಈ ಕಡಿತ ಪ್ರಕರಣಗಳು ಹಾಗೂ ಮರಣ ಪ್ರಕರಣಗಳ ಮಾಹಿತಿಯನ್ನು ಕಡ್ಡಾಯವಾಗಿ ಒದಗಿಸಬೇಕಿದೆ. ಹಿಂದೆ ಖಾಸಗಿ ಆಸ್ಪತ್ರೆಗಳು ಈ ಬಗ್ಗೆ ಸಮರ್ಪಕ ಮಾಹಿತಿ ನೀಡದ ಪರಿಣಾಮ ಪ್ರಕರಣಗಳ ನಿಖರ ಸಂಖ್ಯೆ ದೊರೆಯುತ್ತಿರಲಿಲ್ಲ.

ಆರೋಗ್ಯ ಇಲಾಖೆ ಸಲಹೆ

ನಾಯಿ ಕಡಿತದಿಂದ ಆದ ಗಾಯವನ್ನು ತಕ್ಷಣ ಸೋಪು ಮತ್ತು ನೀರಿನಿಂದ ತೊಳೆಯಬೇಕು ನಂಜುನಿರೋಧಕವನ್ನು ಹಚ್ಚಿಕೊಳ್ಳಬೇಕು ಗಾಯ ದೊಡ್ಡದಾಗಿದ್ದರೆ ಅಥವಾ ರಕ್ತಸ್ರಾವ ಅಧಿಕವಾಗಿದ್ದಲ್ಲಿ ಶುದ್ಧ ಬಟ್ಟೆ ಕಟ್ಟಿಕೊಳ್ಳಬೇಕು ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಕೂಡಲೇ ವೈದ್ಯಕೀಯ ನೆರವು ಪಡೆದಲ್ಲಿ ರೇಬಿಸ್ ತಡೆಯಲು ಸಾಧ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.