ADVERTISEMENT

ನಾಯಿ ಕಚ್ಚಾಟ: ತನಿಖೆಗೆ ಹೈಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 15:46 IST
Last Updated 21 ಫೆಬ್ರುವರಿ 2026, 15:46 IST
<div class="paragraphs"><p>ಕರ್ನಾಟಕ ಹೈಕೋರ್ಟ್</p></div>

ಕರ್ನಾಟಕ ಹೈಕೋರ್ಟ್

   

ಬೆಂಗಳೂರು: ಕಚ್ಚಲು ಬಂದ ನಾಯಿಗೆ ಕಲ್ಲಿ‌ನಿಂದ ಹೊಡೆಯಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನೆರೆಮನೆಯವರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ನಾಯಿಯ ಮಾಲೀಕರ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

‘ನಮ್ಮ ವಿರುದ್ಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಆನೇಕಲ್‌ನ 2ನೇ ಹೆಚ್ಚುವರಿ ಸಿವಿಲ್‌ ಮತ್ತು ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿರುವ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು’ ರದ್ದುಪಡಿಸಬೇಕು ಎಂದು ಕೋರಿ ನಾಯಿಯ ಮಾಲೀಕರಾದ ಮುನಿಕೃಷ್ಣ ಮತ್ತು ಅವರ ಕುಟುಂಬದ 7 ಜನ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು.

ADVERTISEMENT

‘ಅರ್ಜಿದಾರರು ನಾಯಿಯನ್ನು ಮನೆಯಿಂದ ಹೊರಗೆ ಬಿಡಬಾರದು’ ಎಂಬ ಷರತ್ತಿಗೆ ಒಳಪಡಿಸಿ ತನಿಖೆಗೆ ತಡೆ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್ 12ಕ್ಕೆ ಮುಂದೂಡಿತು.

ಏನಿದು ಪ್ರಕರಣ?: ‘ದೂರುದಾರರಾದ ಎಂ.ಮಂಜುಳಾ ಅರ್ಜಿದಾರರ ನೆರೆಮನೆಯವರು. ಮಂಜುಳಾ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೇಳೆ ಅವರನ್ನು ಮುನಿಕೃಷ್ಣ ಅವರಿಗೆ ಸೇರಿದ ನಾಯಿ ಬೆನ್ನಟ್ಟಿ ಕಚ್ಚಲು ಯತ್ನಿಸಿದೆ’ ಎಂಬುದು ಆರೋಪ. ಈ ಸಂಬಂಧ ಮಂಜುಳಾ 2026ರ ಜನವರಿ 5ರಂದು ರಾತ್ರಿ 9.45ಕ್ಕೆ ಸೂರ್ಯನಗರ ಪೊಲೀಸ್ ಠಾಣೆಗೆ ತೆರಳಿ ಮುನಿಕೃಷ್ಣ ಸೇರಿದಂತೆ 7 ಜನರ ವಿರುದ್ಧ ದೂರು ನೀಡಿದ್ದರು.

ದೂರಿಗೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ–2023ರ (ಬಿಎನ್‌ಎಸ್) ಕಲಂ 115(1) (ಗಾಯಗೊಳಿಸುವುದು), 118(1) (ಅಪಾಯಕಾರಿ ಆಯುಧ ಅಥವಾ ವಿಧಾನಗಳಿಂದ ತೀವ್ರವಾಗಿ ಗಾಯಗೊಳಿಸುವುದು), 352 (ಶಾಂತಿ ಭಂಗಕ್ಕೆ ಪ್ರಚೋದಿಸುವ ಅಥವಾ ಉದ್ದೇಶಪೂರ್ವಕ ಅವಮಾನ), 291 (ಪ್ರಾಣಿಗಳ ವಿಷಯದಲ್ಲಿ ನಿರ್ಲಕ್ಷ್ಯದ ನಡವಳಿಕೆ), 189(2) (ಕಾನೂನುಬಾಹಿರ ಗುಂಪುಗೂಡುವಿಕೆ) ಮತ್ತು 190ರ (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.