ADVERTISEMENT

ಶಸ್ತ್ರಚಿಕಿತ್ಸೆ ಬಳಿಕ ನಾಯಿಗಳು ಸಾವು

ಪ್ರಾಣಿ ಜನನದ ಉಸ್ತುವಾರಿ ಸಹಾಯಕ ನಿರ್ದೇಶಕ ಡಾ. ಎಂ.ಜಿ. ಹಳ್ಳಿ ಶಿವರಾಮ್ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 18:44 IST
Last Updated 4 ಫೆಬ್ರುವರಿ 2023, 18:44 IST
ಸೋಂಕು ತಗುಲಿರುವ ನಾಯಿ
ಸೋಂಕು ತಗುಲಿರುವ ನಾಯಿ   

ಬೆಂಗಳೂರು: ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಬೀದಿನಾಯಿಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಡುತ್ತಿದ್ದು, ಕರ್ತವ್ಯಲೋಪ ಎಸಗಿದ ಆರೋಪದಡಿ ಪ್ರಾಣಿ ಜನನದ ಉಸ್ತುವಾರಿ ಸಹಾಯಕ ನಿರ್ದೇಶಕ ಡಾ. ಎಂ.ಜಿ. ಹಳ್ಳಿ ಶಿವರಾಮ್ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಪಶು ಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಪ್ರಾಣಿ ಹಿಂಸೆ ತಡೆ ನಿರೀಕ್ಷಕಿ ನೆವಿನಾ ಕಾಮತ್ ಅವರು ದೂರು ನೀಡಿದ್ದಾರೆ. ಬೆಂಗಳೂರು ನಗರ ದಕ್ಷಿಣ ವಲಯದ ಪ್ರಾಣಿ ಜನನದ ಉಸ್ತುವಾರಿ ಸಹಾಯಕ ನಿರ್ದೇಶಕ ಡಾ. ಎಂ.ಜಿ. ಹಳ್ಳಿ ವಿರುದ್ಧ ಫೆ. 2ರಂದು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಚಾಮರಾಜಪೇಟೆಯಲ್ಲಿರುವ ನಗರ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತಿದೆ. ಈ ಶಸ್ತ್ರಚಿಕಿತ್ಸೆ ವೇಳೆಯಲ್ಲೇ ಸೋಂಕು ತಗುಲುತ್ತಿರುವ ಅನುಮಾನವಿದೆ. ಹೀಗಾಗಿ, ಶಸ್ತ್ರಚಿಕಿತ್ಸೆ ಬಳಿಕ ಬಿಡುಗಡೆಗೊಳಿಸುವ ನಾಯಿಗಳು, ಕೆಲವೇ ದಿನಗಳಲ್ಲಿ ಮೃತಪಡುತ್ತಿರುವುದಾಗಿ ದೂರುದಾರರು ಆರೋಪಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ದೂರಿನ ವಿವರ: ‘ಡಾ. ಎಂ.ಜಿ. ಹಳ್ಳಿ ಶಿವರಾಮ್ ಅವರ ನೇತೃತ್ವದಲ್ಲಿ ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತಿದೆ. ಇಂಥ ಶಸ್ತ್ರಚಿಕಿತ್ಸೆಗೆ ಒಳಗಾದ ನಾಯಿಗಳು ಕೆಲವೇ ವಾರಗಳಲ್ಲಿ ಸಾಯುತ್ತಿರುವ ಬಗ್ಗೆ ದೂರುಗಳು ಬಂದಿವೆ’ ಎಂದು ನೆವಿನಾ ಕಾಮತ್ ದೂರಿನಲ್ಲಿ ಹೇಳಿದ್ದಾರೆ.

‘ಶಸ್ತ್ರಚಿಕಿತ್ಸೆಗೂ ಮುನ್ನ ನಾಯಿಗಳಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡಬೇಕೆಂಬ ನಿಯಮವಿದೆ. ಶಸ್ತ್ರಚಿಕಿತ್ಸೆ ವೇಳೆ ಈ ನಿಯಮ ಉಲ್ಲಂಘನೆಯಾಗಿದೆ. ಬಿಬಿಎಂಪಿ ದಕ್ಷಿಣ ವಲಯದಲ್ಲಿರುವ ಬಹುತೇಕ ನಾಯಿಗಳು, ಕೋರೆ ಹಲ್ಲು ಕಾಯಿಲೆಯಿಂದ ತತ್ತರಿಸುತ್ತಿವೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ನಾಯಿಗಳ ಸಾವಿನ ಬಗ್ಗೆ ಸಹಾಯಕ ನಿರ್ದೇಶಕ ಡಾ. ಎಂ.ಜಿ.ಹಳ್ಳಿ ಶಿವರಾಮ್ ಅವರಿಗೆ ಹಲವು ಬಾರಿ ಮಾಹಿತಿ ನೀಡಲಾಗಿದೆ. ಸೂಕ್ತ ಲಸಿಕೆ ಕೊಡಿಸುವಂತೆಯೂ ಮನವಿ ಮಾಡಲಾಗಿದೆ. ಆದರೆ, ಯಾವುದಕ್ಕೂ ಅವರು ಸ್ಪಂದಿಸಿಲ್ಲ. ತಮಗೆ ವಹಿಸಿದ್ದ ಕರ್ತವ್ಯ ನಿರ್ವಹಣೆ ಮಾಡುವಲ್ಲಿ ಅವರು ವಿಫಲರಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದೂ ನೆವಿನಾ ಕಾಮತ್ ದೂರಿನಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.