ಬಿಬಿಎಂಪಿ
ಬೆಂಗಳೂರು: ‘ನಗರದಲ್ಲಿ ಪರಿಶಿಷ್ಟ ಜಾತಿಯವರ ಸಮಗ್ರ ಸಮೀಕ್ಷೆಯಾಗದ ಮನೆಗಳಿಗೆ ಸ್ಟಿಕರ್ ಅಂಟಿಸದಂತೆ ಗಣತಿ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದು ಬಿಬಿಎಂಪಿ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.
'ನಗರದಾದ್ಯಂತ ಪರಿಶಿಷ್ಟ ಜಾತಿಯವರ ಸಮಗ್ರ ಸಮೀಕ್ಷೆ ಪ್ರತಿ ಅರ್ಹ ಕುಟುಂಬವನ್ನು ಒಳಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳುವ ಗುರಿ ಹೊಂದಲಾಗಿದೆ. ಸಮೀಕ್ಷಾ ತಂಡಗಳು ನಿವಾಸಿಗಳೊಂದಿಗೆ ಸಂವಹನ ನಡೆಸದೆ ಮನೆಗಳ ಮೇಲೆ ಸಮೀಕ್ಷೆಯ ಸ್ಟಿಕರ್‌ಗಳನ್ನು ಅಂಟಿಸಿವೆ ಎಂಬ ದೂರುಗಳು ಬಂದಿದ್ದು, ನಿವಾಸಿಗಳಿಂದ ಮಾಹಿತಿ ಪಡೆಯದೆ ಸ್ಟಿಕರ್ ಅಂಟಿಸದಂತೆ ಸೂಚಿಸಲಾಗಿದೆ’ ಎಂದರು.
‘ಸಮೀಕ್ಷಾ ತಂಡಗಳು ಪ್ರತಿ ಮನೆಗೆ ಭೇಟಿ ನೀಡಿರುವುದನ್ನು ಖಚಿತಪಡಿಸುವ ಮತ್ತು ದೃಢೀಕರಿಸುವ ಉದ್ದೇಶದಿಂದ ಮನೆಗೆ ಸ್ಟಿಕರ್ ಅಂಟಿಸುವುದು ಸಮೀಕ್ಷಾ ಪ್ರಕ್ರಿಯೆಯ ಒಂದು ಭಾಗವಾಗಿದೆ. ಮನೆಯ ಸದಸ್ಯರೊಂದಿಗೆ ಮಾತುಕತೆ ನಡೆಸದೆ ಸ್ಟಿಕರ್ ಅಂಟಿಸಬಾರದು ಎಂದು ಸಮೀಕ್ಷಾ ತಂಡಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಕೆಲ ಸಂದರ್ಭಗಳಲ್ಲಿ ಇದನ್ನು ಅನುಸರಿಸದಿರುವುದನ್ನು ನಾವು ಒಪ್ಪಿಕೊಳ್ಳುತ್ತೇವೆ’ ಎಂದು ಹೇಳಿದರು.
‘ಮನೆಯ ಸದಸ್ಯರಿಂದ ಮಾಹಿತಿ ಪಡೆಯದೆ ಸ್ಟಿಕರ್ ಅಂಟಿಸಿದ್ದರೆ, ಸಹಾಯವಾಣಿ 94813 59000ಗೆ ಕರೆ ಮಾಡಬಹುದು’ ಎಂದು ತಿಳಿಸಿದರು.
‘ಸಮೀಕ್ಷೆಗೆ ಒಳಪಡದ ಯಾವುದೇ ಪರಿಶಿಷ್ಟ ಜಾತಿ ಕುಟುಂಬವು ಆನ್‌ಲೈನ್‌ನಲ್ಲಿ ಸ್ವಯಂ ಘೋಷಣಾ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.