ADVERTISEMENT

ಸೈಬರ್‌ ಪೊಲೀಸ್ ಠಾಣೆ ಉನ್ನತೀಕರಣಕ್ಕೆ ಒತ್ತು: ಅಲೋಕ್ ಮೋಹನ್

ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಡಾ.ಅಲೋಕ್ ಮೋಹನ್ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 22 ಮೇ 2023, 23:02 IST
Last Updated 22 ಮೇ 2023, 23:02 IST
ಪ್ರವೀಣ್‌ ಸೂದ್ (ಎಡಬದಿ) ಅವರಿಂದ ಡಾ.ಅಲೋಕ್‌ ಮೋಹನ್‌ ಅವರು ಅಧಿಕಾರ ಸ್ವೀಕರಿಸಿದರು.
ಪ್ರವೀಣ್‌ ಸೂದ್ (ಎಡಬದಿ) ಅವರಿಂದ ಡಾ.ಅಲೋಕ್‌ ಮೋಹನ್‌ ಅವರು ಅಧಿಕಾರ ಸ್ವೀಕರಿಸಿದರು.   

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿ–ಐಜಿಪಿ) ಡಾ.ಅಲೋಕ್ ಮೋಹನ್ ಅವರು ಸೋಮವಾರ ಪ್ರವೀಣ್‌ ಸೂದ್‌ ಅವರಿಂದ ಅಧಿಕಾರ ಸ್ವೀಕರಿಸಿದರು. ಡಿಜಿ–ಐಜಿಪಿಯಾಗಿದ್ದ ಪ್ರವೀಣ್ ಸೂದ್ ಅವರನ್ನು ಸೋಮವಾರ ಈ ಹುದ್ದೆಯಿಂದ ಬಿಡುಗಡೆ ಮಾಡಲಾಯಿತು.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಅಲೋಕ್ ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಿ ಎರಡು ದಿನಗಳ ಹಿಂದೆ ಆದೇಶಿಸಲಾಗಿತ್ತು.

ಬಿಹಾರದ ಪಟ್ನಾದ ಅಲೋಕ್‌ ಮೋಹನ್, 1987ನೇ ಬ್ಯಾಚ್‌ನ ಅಧಿಕಾರಿ. 1965ರ ಏಪ್ರಿಲ್‌ 18ರಂದು ಜನಿಸಿರುವ ಇವರು ಉತ್ತರಾಖಂಡದ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯಲ್ಲಿ ಎಂಎಸ್ಸಿ ಪೂರೈಸಿದ್ದರು. ಭಾರತೀಯ ಆಂತರಿಕಾ ಭದ್ರತೆ ಬಗ್ಗೆ ಪಿ.ಎಚ್‌ಡಿ ಮಾಡಿದ್ದಾರೆ.

ADVERTISEMENT

ರಾಜ್ಯದ ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಎಸ್‌ಪಿಯಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಸಿಐಡಿಯ ಡಿಜಿಪಿಯಾಗಿ, ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತರಾಗಿ, ಪಶ್ಚಿಮ ವಲಯದ ಐಜಿಪಿಯಾಗಿ ಕೆಲಸ ಮಾಡಿದ್ದರು. ಆಡಳಿತ ಹಾಗೂ ಕಾರಾಗೃಹ ಮತ್ತು ಅಗ್ನಿಶಾಮಕ ದಳದ ಡಿಜಿಪಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಸೈಬರ್ ಠಾಣೆ ಮೇಲ್ದರ್ಜೆಗೆ: ಅಧಿಕಾರ ಸ್ವೀಕರಿಸಿದ ಬಳಿಕ ಅಲೋಕ್‌ ಮೋಹನ್‌ ಮಾತನಾಡಿ, ರಾಜ್ಯದಲ್ಲಿರುವ ಎಲ್ಲ ಸೈಬರ್ ಪೊಲೀಸ್‌ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಇದರಿಂದ ಸೈಬರ್ ಅಪರಾಧ ಪ್ರಕರಣ ತಡೆಗಟ್ಟಲು ಸಾಧ್ಯವಾಗಲಿದೆ. ಜತೆಗೆ ಜಿಲ್ಲಾ ವ್ಯಾಪ್ತಿಯಲ್ಲೂ ಸೈಬರ್ ಪೊಲೀಸ್‌ ಠಾಣೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ತಗ್ಗಿಸುವುದು, ಸೈಬರ್ ಅಪರಾಧ ತಡೆಗಟ್ಟಲಾಗುವುದು. ಅಕ್ರಮಗಳಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

‘ಠಾಣೆ ಹಂತದಲ್ಲಿ ದೂರು ಬಂದ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಕೃತ್ಯ ನಡೆದ ಸ್ಥಳಕ್ಕೆ ಭೇಟಿ ಕೊಡಬೇಕು. ಉತ್ತಮ ಅಧಿಕಾರಿಗಳನ್ನು ಪ್ರಶಂಸೆ ಮಾಡುತ್ತೇನೆ. ಅದಕ್ಷ ಅಧಿಕಾರಿಗಳಿಗೆ ಶಿಕ್ಷೆ ಕಾದಿದೆ‘ ಎಂದು ಎಚ್ಚರಿಸಿದರು.

‘ಸ್ವಚ್ಛ ಆಡಳಿತಕ್ಕೆ ಬದ್ಧನಿದ್ದೇನೆ. ಕಾನೂನು ಸುವ್ಯವಸ್ಥೆ ಹಾಳು ಮಾಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಮಾರ್ಗಮಧ್ಯದಲ್ಲಿ ವಾಹನಗಳನ್ನು ತಡೆದು ತಪಾಸಣೆ ನಡೆಸುವುದಕ್ಕಿಂತ ಸಂಚಾರ ಸುಧಾರಣೆಗೆ ಆದ್ಯತೆ ನೀಡಲಾಗುವುದು. ಸಿಬ್ಬಂದಿಗಳ ಕೌಶಲ ಹೆಚ್ಚಿಸಲು ಆದ್ಯತೆ ನೀಡಲಾಗುವುದು’ ಎಂದರು.

ಪೊಲೀಸ್ ಇಲಾಖೆ ಸೋಮವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರವೀಣ್ ಸೂದ್ ಅವರು ಗೌರವ ವಂದನೆ ಸ್ವೀಕರಿಸಿದರು.

ಕರ್ನಾಟಕದಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ.ಈ ಅವಧಿಯಲ್ಲಿ ರಾಜ್ಯದ ಜನರು ಉತ್ತಮ ಸಹಕಾರ ನೀಡಿದರು. ಅವರಿಗೆ ಚಿರಋಣಿ.

-ಪ್ರವೀಣ್‌ ಸೂದ್‌ ನೂತನ ಸಿಬಿಐ ನಿರ್ದೇಶಕ

ಪ್ರವೀಣ್‌ ಸೂದ್‌ಗೆ ಬೀಳ್ಕೊಡುಗೆ ಗೌರವ ವಂದನೆ ಸ್ವೀಕಾರ

ಬೆಂಗಳೂರು: ಸಿಬಿಐ ನೂತನ ನಿರ್ದೇಶಕರಾಗಿ ನೇಮಕಗೊಂಡಿರುವ ಪ್ರವೀಣ್‌ ಸೂದ್ ಅವರನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಹುದ್ದೆಯಿಂದ ಸೋಮವಾರ ಬಿಡುಗಡೆ ಮಾಡಲಾಯಿತು. ಅವರಿಗೆ ಪೊಲೀಸ್ ಇಲಾಖೆಯಿಂದ ಕೋರಮಂಗಲದ ಕೆಎಸ್‌ಆರ್‌ಪಿ ಕವಾಯತು ಮೈದಾನದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಪ್ರವೀಣ್‌ ಸೂದ್‌ ‘ಪೊಲೀಸ್ ಇಲಾಖೆ ಬೇರೆ ಇಲಾಖೆಯಂತೆ ಅಲ್ಲ. ವಿಭಿನ್ನವಾದ ಇಲಾಖೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯ ಸರ್ಕಾರದಲ್ಲಿ ಹೆಚ್ಚಿನ ಮಹತ್ವವುಳ್ಳ ಇಲಾಖೆ ಇದಾಗಿದೆ’ ಎಂದು ಹೇಳಿದರು. ‘ಇಲಾಖೆ ಸಿಬ್ಬಂದಿ ರಸ್ತೆಯಲ್ಲೇ ನಿಂತು ಬಂದೋಬಸ್ತ್‌ ಕೆಲಸ ಮಾಡುತ್ತಾರೆ.

ಕಾರಣಾಂತರಗಳಿಂದ ಸಿಬ್ಬಂದಿ ರಜೆ ತೆಗೆದುಕೊಳ್ಳುವುದು ಸಹ ಕಷ್ಟಸಾಧ್ಯವಾಗುತ್ತದೆ. ಪೊಲೀಸ್‌ ಸಿಬ್ಬಂದಿ ತಮ್ಮ ಕುಟುಂಬದ ಬಗ್ಗೆಯೂ ಯೋಚಿಸಬೇಕು’ ಎಂದು ಸಲಹೆ ನೀಡಿದರು. ‘ನನ್ನ ಸೇವಾವಧಿಯಲ್ಲಿ ಉತ್ತಮ ತರಬೇತಿ ಉತ್ತಮ ಪೊಲೀಸ್ ಠಾಣೆ ನಿರ್ಮಾಣ ಸಿಬ್ಬಂದಿಗಳ ವಸತಿ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೆ’ ಎಂದರು. ‘ಈ ಬಾರಿಯ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಅಧಿಕಾರಿ-ಸಿಬ್ಬಂದಿ ಉತ್ತಮ ಕರ್ತವ್ಯ ನಿರ್ವಹಿಸಿದ್ದಾರೆ. ಎಲ್ಲಿಯೂ ಮರು ಚುನಾವಣೆ ನಡೆದಿಲ್ಲ’ ಎಂದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಎಡಿಜಿಪಿ ಸೀಮಂತ್‌ಕುಮಾರ್ ಸಿಂಗ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.