ಬೆಂಗಳೂರು: ಸರ್ಕಾರದ ಮೂಲಕ ಖಾಸಗಿ ಆಸ್ಪತ್ರೆಗೆ ಕೋವಿಡ್ ಚಿಕಿತ್ಸೆಗಾಗಿ ದಾಖಲಾದರೆ, ಅವರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಕೋವಿಡ್ ಚಿಕಿತ್ಸೆಯ ಹೆಸರಿನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ನಿಯಮ 69ರ ಅಡಿ ಮಾಡಿದ ಆರೋಪಕ್ಕೆ ಸಚಿವರು ಮಧ್ಯಪ್ರವೇಶಿಸಿ ಸಮಜಾಯಿಷಿ ನೀಡಿದರು.
ಚರ್ಚೆಯ ಸಂದರ್ಭದಲ್ಲಿ ಜೆಡಿಎಸ್‌ನ ಶಿವಲಿಂಗೇಗೌಡ ಅವರು, ‘ಕೋವಿಡ್ ಚಿಕಿತ್ಸೆಯಲ್ಲಿ ಖಾಸಗಿ ಆಸ್ಪತ್ರೆಗಳು ಲಕ್ಷಗಟ್ಟಲೆ ಬಿಲ್ ಮಾಡುತ್ತವೆ. ಆಂಬುಲೆನ್ಸ್‌ನಲ್ಲಿ ಶವ ಸಾಗಿಸಲೂ ₹40 ಸಾವಿರ ಪಡೆದ ಉದಾಹರಣೆಯೂ ಇದೆ. ನಾನೂ ಕೋವಿಡ್‌ನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಲಕ್ಷಗಟ್ಟಲೆ ಬಿಲ್ ಕೊಡಬೇಕಾಯಿತು’ ಎಂದು ದೂರಿದರು.
ಕಾಂಗ್ರೆಸ್ ಸದಸ್ಯರ ಸಭಾತ್ಯಾಗ
‘ಕೊರೊನಾ ಬಗ್ಗೆ ಜನರ ಮನೋಸ್ಥೈರ್ಯ ಹೆಚ್ಚಿಸುವ ಕೆಲಸವನ್ನು ಸರ್ಕಾರ ಮಾಡಿದೆ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ನೀಡಿದ ಉತ್ತರ ತೃಪ್ತಿಕರವಾಗಿಲ್ಲ’ ಎಂದು ಆಕ್ಷೇಪಿಸಿ ವಿಧಾನಪರಿಷತ್‌ನ ಕಾಂಗ್ರೆಸ್ ಸದಸ್ಯರು ಮಂಗಳವಾರ ಸಭಾತ್ಯಾಗ ಮಾಡಿದರು.
ಕಾಂಗ್ರೆಸ್‌ನ ಎಂ. ನಾರಾಯಣ ಸ್ವಾಮಿ ಮತ್ತು ಪಿ.ಆರ್. ರಮೇಶ್ ಪ್ರಶ್ನೆಗೆ ಉತ್ತರ ನೀಡಿದ ಶ್ರೀರಾಮುಲು, ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಸಮರ್ಥಿಸಿದರು. ‘ವ್ಯಾಕ್ಸಿನ್ ಬರುವವರೆಗೆ ನಾವು ಈ ಪರಿಸ್ಥಿತಿ ಎದುರಿಸುತ್ತಲೇ ಸಾಗಬೇಕಿದೆ. ಕೋವಿಡ್ ಜತೆಗೇ ಬದುಕಬೇಕು’ ಎಂದರು.
ಇದಕ್ಕೆ ಆಕ್ಷೇಪಿಸಿದ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ‘ಸೋಂಕು ಹರಡಲು ಸರ್ಕಾರದ ವೈಫಲ್ಯ ಕಾರಣ. ಸಚಿವರ ಉತ್ತರ ತೃಪ್ತಿದಾಯಕವಾಗಿಲ್ಲ’ ಎಂದು ಸದನದಿಂದ ಹೊರನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.