ADVERTISEMENT

ಡಾ. ಶಿವರಾಮ ಕಾರಂತ ಬಡಾವಣೆ: ಹೊಸ ಕಟ್ಟಡ ನಿರ್ಮಾಣ ಸ್ಥಗಿತಕ್ಕೆ ‘ಸುಪ್ರೀಂ’ ಆದೇಶ

2018ರ ಆ.3ರ ನಂತರ ನಿರ್ಮಿಸಿರುವ ಕಟ್ಟಡ ಸಕ್ರಮ ಇಲ್ಲ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 19:50 IST
Last Updated 17 ಜುಲೈ 2021, 19:50 IST
.
.   

ನವದೆಹಲಿ: ಬೆಂಗಳೂರಿನ ಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ ಹೊಸ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಕ್ರಮಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಆದೇಶ ನೀಡಿದೆ.

2018ರ ಆಗಸ್ಟ್‌ 3ರ ನಂತರ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು ಸಾಧ್ಯವಿಲ್ಲ. ಹೀಗಾಗಿ, ಈ ಕಟ್ಟಡಗಳನ್ನು ಒಡೆದು ಹಾಕಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ನ್ಯಾಯಮೂರ್ತಿಗಳಾದ ಎಸ್‌. ಅಬ್ದುಲ್‌ ನಜೀರ್‌ ಮತ್ತು ಸಂಜೀವ್‌ ಖನ್ನಾ ಅವರನ್ನೊಳಗೊಂಡ ಪೀಠವು ಈ ನಿರ್ದೇಶನ ನೀಡಿದೆ. ಕಟ್ಟಡ ನಿರ್ಮಾಣ ಚಟುವಟಿಕೆ ಸ್ಥಗಿತಗೊಳಿಸುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪೀಠವು ತಿಳಿಸಿದೆ.

ADVERTISEMENT

ಇದೇ ವೇಳೆ, ಡಾ.ಕೆ.ಶಿವರಾಮ ಕಾರಂತ ಬಡಾವಣೆಗಾಗಿ ಗುರುತಿಸಲಾದ ಜಾಗದಲ್ಲಿ ಕಾನೂನುಬದ್ಧವಾಗಿ ನಿರ್ಮಾಣವಾಗಿರುವ ಕಟ್ಟಡಗಳು ಮತ್ತು ವಾಸದ ಮನೆಗಳನ್ನು ಗುರುತಿಸುವ ಸಲುವಾಗಿ ಸುಪ್ರೀಂ ಕೋರ್ಟ್‌ ನೇಮಿಸಿರುವ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ನೇತೃತ್ವದ ಸಮಿತಿಯ ಅವಧಿಯನ್ನು 2022ರ ಮಾರ್ಚ್‌ 31ರವರೆಗೆ ನ್ಯಾಯಾಲಯವು ವಿಸ್ತರಿಸಿದೆ.

ಬಿಡಿಎಗೆ ಹೆಚ್ಚುವರಿಯಾಗಿ ಒಬ್ಬ ಕಾರ್ಯನಿರ್ವಾಹಕ ಎಂಜಿನಿಯರ್‌ (ಇಇ), ಇಬ್ಬರು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಮತ್ತು ನಾಲ್ವರು ಸಹಾಯಕ ಎಂಜಿನಿಯರ್‌ಗಳನ್ನು (ಎಇ) 15 ದಿನಗಳ ಒಳಗೆ ನಿಯೋಜಿಸಬೇಕು ಎಂದು ಪೀಠವು ರಾಜ್ಯ ಸರ್ಕಾರಕ್ಕೆ ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದೆ.

ಜೂನ್‌ 2ರಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿದ ಪೀಠವು, ’ಇದುವರೆಗೆ ಬಿಡಿಎ ಯಾವುದೇ ಭೂ ಸ್ವಾಧೀನ ಕೈಗೊಂಡಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಸ್ವಾಧೀನ ಪ್ರಕ್ರಿಯೆಯನ್ನು ಬಿಡಿಎ ತ್ವರಿತಗೊಳಿಸಿ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.