ADVERTISEMENT

ಮನೆಗಳಿಗೆ ಕೊಳಚೆ ನೀರು ಪೂರೈಕೆ: ಸಾರ್ವಜನಿಕರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 19:36 IST
Last Updated 10 ಸೆಪ್ಟೆಂಬರ್ 2020, 19:36 IST
ಕುಡಿಯುವ ನೀರಿನ ಜೊತೆಗೆ ಕೊಳಚೆ ನೀರು ಮಿಶ್ರಣ ಆಗಿರುವುದು
ಕುಡಿಯುವ ನೀರಿನ ಜೊತೆಗೆ ಕೊಳಚೆ ನೀರು ಮಿಶ್ರಣ ಆಗಿರುವುದು   

ಬೆಂಗಳೂರು: ಕುಡಿಯುವ ನೀರಿನ ಜೊತೆಗೆ, ಕೊಳಚೆ ನೀರು ಮಿಶ್ರಣವಾಗಿ ಪೂರೈಕೆಯಾಗಿದ್ದರಿಂದ ಜೆ.ಪಿ. ನಗರದ ನಿವಾಸಿಗಳು ತೊಂದರೆಗೆ ಒಳಗಾದರು.

‘ಕುಡಿಯುವ ನೀರಿನ ಪೈಪ್‌ ಮತ್ತು ಒಳಚರಂಡಿ ಪೈಪ್‌ ಒಡೆದು ನೀರು ಸೇರಿದೆ. ಇಂತಹ ನೀರನ್ನು ಬಳಸಿದ್ದರಿಂದ ಎಲ್ಲರಿಗೂ ಭೇದಿ, ಜ್ವರ ಕಾಣಿಸಿಕೊಂಡಿದೆ’ ಎಂದು ಜೆ.ಪಿ. ನಗರ ನಿವಾಸಿ ರಾಜೇಶ್‌ ಶೆಟ್ಟಿ ಹೇಳಿದರು.

‘ಆರು ತಿಂಗಳುಗಳಿಂದ ಇದೇ ಸಮಸ್ಯೆ ಎದುರಿಸುತ್ತಿದ್ದೇವೆ. ಟ್ಯಾಂಕ್‌ ಸ್ವಚ್ಛಗೊಳಿಸುವುದು, ಟ್ಯಾಂಕರ್‌ನಿಂದ ನೀರು ತರಿಸಿಕೊಳ್ಳುವ ಕೆಲಸವಾಗಿದೆ. ದೂರು ನೀಡಿದಾಗ ಕೆಲವು ದಿನಗಳ ನಂತರ ಬಂದು ಸರಿ ಮಾಡುತ್ತಾರೆ. ಒಂದೆರಡು ದಿನಗಳಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ’ ಎಂದೂ ಅವರು ಹೇಳಿದರು.

ADVERTISEMENT

‘ಈ ಬಗ್ಗೆ ಬುಧವಾರ ಸಂಜೆ ದೂರು ಬಂತು. ಗುರುವಾರ ಬೆಳಿಗ್ಗೆಯೇ ಸರಿ ಮಾಡಲಾಗಿದೆ. ಒಂದು ಮನೆಯ ಒಳಚರಂಡಿ ಪೈಪ್‌ ಒಡೆದು ಹೋಗಿದ್ದರಿಂದ ಈ ಸಮಸ್ಯೆಯಾಗಿತ್ತು. ಅದನ್ನು ಸರಿ ಮಾಡಲಾಗಿದೆ’ ಎಂದು ಜಲಮಂಡಳಿಯ ಅಧಿಕಾರಿ ಹೇಳಿದರು.

‘ನಿರ್ದಿಷ್ಟವಾಗಿ ಯಾವ ಪೈಪ್‌ ಹಾನಿಯಾಗಿ ಈ ರೀತಿಯಾಗುತ್ತಿದೆ ಎಂಬುದು ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಹಾನಿಗೊಳಗಾಗಿದ್ದ ಪೈಪ್‌ಗಳು ಪತ್ತೆಯಾದ ತಕ್ಷಣ ಸರಿ ಮಾಡುತ್ತಿದ್ದೇವೆ. ಒಂದೆರಡು ಬಾರಿ ನೀರು ಪೂರೈಕೆ ನಂತರ ಮತ್ತೆ ಪರೀಕ್ಷಿಸಲಾಗುವುದು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.