ADVERTISEMENT

ದಾಬಸ್ ಪೇಟೆ: 2 ವರ್ಷ ಕಳೆದರೂ ರಿಪೇರಿ ಆಗದ ಕುಡಿಯುವ ನೀರಿನ ಘಟಕ!

ಸಿ.ಜಿ.ಮೋಹನ್ ಕುಮಾರ್‌
Published 16 ಸೆಪ್ಟೆಂಬರ್ 2025, 21:07 IST
Last Updated 16 ಸೆಪ್ಟೆಂಬರ್ 2025, 21:07 IST
ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ
ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ   

ದಾಬಸ್ ಪೇಟೆ: ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕಾದ ಘಟಕ ಹಾಳಾಗಿ ಎರಡು ವರ್ಷವಾದರೂ ದುರಸ್ತಿಯಾಗಿಲ್ಲ.

ನೆಲಮಂಗಲ ತಾಲ್ಲೂಕು, ಸೋಂಪುರ ಹೋಬಳಿ, ನರಸೀಪುರ ಗ್ರಾಮ ಪಂಚಾಯಿತಿಗೆ ಸೇರುವ ಹಾಲೇನಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವೇ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿಲ್ಲ.

100ಕ್ಕೂ ಹೆಚ್ಚು ಮನೆಗಳುಳ್ಳ ಈ ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ADVERTISEMENT

ಹಾಲೇನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಸಾಲಹಟ್ಟಿ, ಜಾಜೂರು, ಲಕ್ಷ್ಮೀಪುರ, ಪಾಂಡವಪುರ ಹಾಗೂ ಸಣ್ಣಪುಟ್ಟ ಹಳ್ಳಿಗಳ ಜನರೂ ಕುಡಿಯುವ ನೀರಿಗೆ ಈ ಘಟಕವನ್ನು ಅವಲಂಬಿಸಿದ್ದಾರೆ.

ಮಾರುತಿ ಸುಜುಕಿ ಕಂಪನಿಯವರು ಕೆಲ ವರ್ಷಗಳ ಹಿಂದೆ ಈ ಘಟಕವನ್ನು ನಿರ್ಮಾಣ ಮಾಡಿದ್ದು, ‘ವಾಟರ್ ಲೈಫ್ ಇಂಡಿಯಾ ಕಂಪನಿ’ ನಿರ್ವಹಣೆ ಮಾಡುತ್ತಿತ್ತು. ಘಟಕ ಕಾರ್ಯನಿರ್ವಹಿಸಲು ಬಳಸಿಕೊಂಡಿರುವ ವಿದ್ಯುತ್ ಬಿಲ್ ಪಾವತಿ ಮಾಡದೇ ಇದ್ದದ್ದರಿಂದ ಬೆಸ್ಕಾಂ ಇಲಾಖೆ ಘಟಕಕ್ಕೆ ವಿದ್ಯುತ್ ಸಂಪರ್ಕ ಕಡಿತ ಮಾಡಿತ್ತು. ಬಿಲ್ ಪಾವತಿಸುವುದಾಗಿ ಬೆಸ್ಕಾಂ ಸಿಬ್ಬಂದಿಯಲ್ಲಿ ಮನವಿ ಮಾಡಿದ್ದರಿಂದ ಒಂದಷ್ಟು ತಿಂಗಳು ಘಟಕಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದರು. ಮತ್ತೆ ವಿದ್ಯುತ್ ಬಿಲ್ ಪಾವತಿಸದಿದ್ದರಿಂದ ವಿದ್ಯುತ್ ಕಡಿತ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

‘ಇದಕ್ಕೆ ಸಂಬಂಧಿಸಿದವರಲ್ಲಿ ಹಾಗೂ ಸ್ಥಳೀಯ ಪಂಚಾಯಿತಿಯಲ್ಲಿ ಈ ಬಗ್ಗೆ ಮನವಿ ಮಾಡಿ, ದೂರು ನೀಡಿದರೂ ಘಟಕ ಎರಡು ವರ್ಷದಿಂದ ರಿಪೇರಿ ಆಗಿಲ್ಲ’ ಎಂದು ಗ್ರಾಮಸ್ಥ ರಾಜಣ್ಣ ದೂರಿದರು.

‘ಘಟಕ ಕೆಟ್ಟಿರುವುದರಿಂದ ಜನರು ಅನಿವಾರ್ಯವಾಗಿ ದೂರದ ಊರುಗಳಿಗೆ ಹೋಗಿ ನೀರು ತರಬೇಕಿದೆ. ದ್ವಿಚಕ್ರ ವಾಹನ ಇರುವವರು ದೂರದ ಊರುಗಳಿಗೆ ಹೋಗಿ ನೀರು ತರುತ್ತಾರೆ. ವಯಸ್ಸಾದವರು, ವಾಹನ ಇಲ್ಲದವರ ಗತಿ ಏನು’ ಎಂದು ಲಕ್ಷ್ಮಯ್ಯ ಪ್ರಶ್ನಿಸಿದರು.

‘ಘಟಕ ಆರಂಭವಾದಾಗಿನಿಂದಲೂ ಆಗಾಗ ವಿದ್ಯುತ್ ಪಾವತಿ ಮಾಡದ್ದಕ್ಕೆ ಹಾಗೂ ಇತರ ಕಾರಣಗಳಿಂದ ಸ್ಥಗಿತಗೊಳ್ಳುತ್ತಲೇ ಇದೆ’ ಎಂದು ಪವನ್‌ ಆರೋಪಿಸಿದರು.

ವಾಟರ್ ಲೈಫ್‌ನ ಶಿವಕುಮಾರ್ ಅವರನ್ನು ಈ ಸಂಬಂಧ ಪತ್ರಿಕೆ ಸಂಪರ್ಕಿಸಿದಾಗ, ‘ಮತ್ತೆ ಕರೆ ಮಾಡುವುದಾಗಿ’ ಹೇಳಿ ಕರೆ ಸ್ಥಗಿತಗೊಳಿಸಿದರು.

ತಾಲ್ಲೂಕು ಪಂಚಾಯಿತಿ ಇಒ, ಗ್ರಾಮ ಪಂಚಾಯಿತಿ ಪಿಡಿಒ ಅವರಿಂದ ಮಾಹಿತಿ ಪಡೆಯಲು ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

‘ಇದು ಪಂಚಾಯಿತಿ ವ್ಯಾಪ್ತಿಗೆ ಬರುವುದಿಲ್ಲ. ವಾಟರ್ ಲೈಫ್ ಕಂಪನಿ ನಿರ್ವಹಣೆ ಮಾಡುತ್ತಿದೆ. ವಿದ್ಯುತ್ ಬಿಲ್ ಪಾವತಿಸಿ ಘಟಕ ರಿಪೇರಿ ಮಾಡಿ ಪಂಚಾಯಿತಿಗೆ ನೀಡಿದರೆ ನಾವು ನಿರ್ವಹಿಸುತ್ತೇವೆ’ ಎಂದು ನರಸೀಪುರ ಪಂಚಾಯಿತಿ ಅಧ್ಯಕ್ಷ ರಾಮಾಂಜನಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.