ADVERTISEMENT

ಶಾಲಾ ವಾಹನಗಳ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಜುಲೈ 2018, 20:09 IST
Last Updated 16 ಜುಲೈ 2018, 20:09 IST
ಆಟೊದಲ್ಲಿ ನಿಗದಿಗಿಂತ ಹೆಚ್ಚು ಮಕ್ಕಳಿರುವುದು
ಆಟೊದಲ್ಲಿ ನಿಗದಿಗಿಂತ ಹೆಚ್ಚು ಮಕ್ಕಳಿರುವುದು   

ಬೆಂಗಳೂರು: ನಗರದಲ್ಲಿ ಸೋಮವಾರ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಶಾಲಾ ವಾಹನಗಳ ಚಾಲಕರು, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.

ಬೆಳಿಗ್ಗೆ 6ಕ್ಕೆ ರಸ್ತೆಗೆ ಇಳಿದಿದ್ದ ಪೊಲೀಸರು, ತಮ್ಮ ಠಾಣೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ನಿಂತು ವಾಹನಗಳನ್ನು ತಡೆದು ತಪಾಸಣೆ ನಡೆಸಿದರು.

ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುತ್ತಿದ್ದ, ವಿಮೆ ಇಲ್ಲದ, ಸೀಟ್‌ ಬೆಲ್ಟ್‌ ಧರಿಸದ, ಪರವಾನಗಿ ಹೊಂದಿರದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.

ADVERTISEMENT

‘ಶಾಲಾ ಮಕ್ಕಳನ್ನು ವಾಹನಗಳಲ್ಲಿ ಕರೆದೊಯ್ಯುವ ಬಗ್ಗೆ ಸಾರಿಗೆ ಇಲಾಖೆ ನಿಯಮಗಳನ್ನು ರೂಪಿಸಿದೆ. ಆದರೆ, ಅವುಗಳನ್ನು ಉಲ್ಲಂಘಿಸಿ ಚಾಲಕರು ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಇದರಿಂದ ಮಕ್ಕಳ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಅದೇ ಕಾರಣಕ್ಕೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮಕ್ಕಳು ಶಾಲೆಗೆ ಬಿಟ್ಟು ವಾಹನಗಳ ಜಪ್ತಿ: ಕಾರ್ಯಾಚರಣೆ ವೇಳೆ ಸಾವಿರಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಅವುಗಳ ಚಾಲಕರಿಗೆ ನೋಟಿಸ್‌ ನೀಡಲಾಗಿದೆ.

‘ವಾಹನಗಳಲ್ಲಿ ಮಕ್ಕಳಿದ್ದ ವೇಳೆಯಲ್ಲೇ ಪೊಲೀಸರು ತಪಾಸಣೆ ನಡೆಸಿದ್ದರು. ನಿಯಮ ಉಲ್ಲಂಘನೆ ಪತ್ತೆಯಾಗುತ್ತಿದ್ದಂತೆ, ಅದೇ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ತಲುಪಿಸಿ ನಂತರವೇ ಜಪ್ತಿ ಮಾಡಲಾಗಿದೆ’ ಎಂದು ಅಧಿಕಾರಿ ಹೇಳಿದರು.

ಓಮ್ನಿಯಲ್ಲಿ 16 ಮಕ್ಕಳು: ಹಲಸೂರು ಸಂಚಾರ ಪೊಲೀಸರು, 16 ಮಕ್ಕಳನ್ನು ಕರೆದುಕೊಂಡು ಹೊರಟಿದ್ದ ಓಮ್ನಿ ವಾಹನವನ್ನು ಜಪ್ತಿ ಮಾಡಿದರು.

‘ಓಮ್ನಿಯಲ್ಲಿ ಗರಿಷ್ಠ 10 ಮಂದಿ ಸಂಚರಿಸಬಹುದು. ಆದರೆ, ಇಲ್ಲಿ 16 ಮಕ್ಕಳನ್ನು ಕರೆದೊಯ್ಯಲಾಗುತ್ತಿತ್ತು. ಅದಕ್ಕೆ ತಕ್ಕಂತೆ ವಾಹನದ ರೂಪವನ್ನೇ ಬದಲಿಸಲಾಗಿತ್ತು. ವಾಹನಕ್ಕೆ ವಿಮೆ ಸಹ ಮಾಡಿಸಿರಲಿಲ್ಲ. ಅದೇ ಕಾರಣಕ್ಕೆ ಜಪ್ತಿ ಮಾಡಿ, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಅಧಿಕಾರಿ ತಿಳಿಸಿದರು.

‘ಆಟೊಗಳಲ್ಲೂ ನಿಗದಿಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯಲಾಗುತ್ತಿತ್ತು. ಅಂಥ 50 ಆಟೊಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.