ADVERTISEMENT

ಕೆಂಪೇಗೌಡ ಅಧ್ಯಯನ ಕೇಂದ್ರ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2018, 19:22 IST
Last Updated 14 ಜುಲೈ 2018, 19:22 IST
ಕೆಂಪೇಗೌಡ ಅಧ್ಯಯನ ಕೇಂದ್ರ ಕಟ್ಟಡ ನಿರ್ಮಾಣ ಸಮಾಲೋಚನಾ ಸಭೆಯಲ್ಲಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್, ನಿರ್ಮಲಾನಂದನಾಥ ಸ್ವಾಮೀಜಿ, ಕುಲಸಚಿವ ಬಿ.ಕೆ.ರವಿ ಇದ್ದರು.
ಕೆಂಪೇಗೌಡ ಅಧ್ಯಯನ ಕೇಂದ್ರ ಕಟ್ಟಡ ನಿರ್ಮಾಣ ಸಮಾಲೋಚನಾ ಸಭೆಯಲ್ಲಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್, ನಿರ್ಮಲಾನಂದನಾಥ ಸ್ವಾಮೀಜಿ, ಕುಲಸಚಿವ ಬಿ.ಕೆ.ರವಿ ಇದ್ದರು.   

ಬೆಂಗಳೂರು: ಕೆಂಪೇಗೌಡ ಅಧ್ಯಯನ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ತಿಳಿಸಿದರು.

ಸುಮಾರು 3 ಎಕರೆ ಪ್ರದೇಶದಲ್ಲಿ ಎರಡು ಅಂತಸ್ತುಗಳೊಂದಿಗೆ ಕಟ್ಟಡ ನಿರ್ಮಾಣವಾಗಲಿದೆ. ಸರ್ಕಾರದಿಂದ ₹ 50 ಕೋಟಿ ಅನುದಾನ ದೊರಕಿದ್ದು, ಇನ್ನು ಒಂದೂವರೆ ವರ್ಷದ ಒಳಗೆ ನಿರ್ಮಾಣ ಮುಗಿಯಲಿದೆ. ಸುಮಾರು 1,500 ವಿದ್ಯಾರ್ಥಿಗಳು ಈ ವಿಭಾಗದಲ್ಲಿ ಅಧ್ಯಯನ ನಡೆಸಲು ಅವಕಾಶವಿದ್ದು, ಕಟ್ಟಡದಲ್ಲಿ ವಿಶಾಲವಾದ ಪ್ರಾಂಗಣ, ರಂಗಮಂದಿರ, ಹಾಗೂ ಎಸ್.ಟಿ.ಪಿ(ತ್ಯಾಜ್ಯ ಸಂಸ್ಕರಣ ಘಟಕ)ಗೂ ಅವಕಾಶ ಕಲ್ಪಿಸಲಾಗಿದೆ. ಕೆಂಪೇಗೌಡರ ಹಲವು ನೆನಪುಗಳನ್ನು ಕಟ್ಟಡದಲ್ಲಿ ಪುನರ್ ನಿರ್ಮಾಣ ಮಾಡುವುದರೊಂದಿಗೆ ಈ ಅಧ್ಯಯನ ಕೇಂದ್ರವು ಒಂದು ಮಾದರಿ ಕಟ್ಟಡವಾಗುವ ರೀತಿಯಲ್ಲಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ಆದಿಚುಂಚನಗಿರಿ ಕ್ಷೇತ್ರದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಅಧ್ಯಯನ ಪೀಠ ಕಟ್ಟಡದ ನೀಲನಕ್ಷೆ ಪರಿಶೀಲಿಸಿ ಮಾತನಾಡಿ, ಅಧ್ಯಯನ ಕೇಂದ್ರ ಕಟ್ಟಡವು ಹಸಿರು ಕಟ್ಟಡವಾಗಿ ನಿರ್ಮಾಣವಾಗಲಿ, ಗಾಳಿ ಬೆಳಕು ನೈಸರ್ಗಿಕವಾಗಿ ಬರುವಂತೆ ನಕ್ಷೆಯನ್ನು ರೂಪಿಸುವಂತೆ ಸಲಹೆ ನೀಡಿದರು. ಕಟ್ಟಡದ ಸುತ್ತ ನಾಲ್ಕು ಗೋಪುರಗಳನ್ನು ನಿರ್ಮಿಸುವ ಮೂಲಕ ಕೆಂಪೇಗೌಡರ ದೂರದೃಷ್ಟಿಯನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸುವಂತೆ ಕೋರಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.